Site icon Ullalavani

ಕುತ್ತಾರು:ಯೋಧರಿಗೆ ಶ್ರದ್ಧಾಂಜಲಿ ಸಭೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು: ಕೈಬೆರಳುಗಳೆಲ್ಲಾ ಸವೆಯುತ್ತದೆ, ಹಸಿವು ಆದರೂ ತಿನ್ನಲು ಆಗುವುದಿಲ್ಲ, ಜನರ ಕಣ್ಣಲ್ಲಿ ಅದು ಸ್ವರ್ಗ ಅನಿಸಿದರೂ ನಮ್ಮ ಪಾಲಿಗೆ ಅದು ಅಕ್ಷರಶ: ನರಕ.ಇದು ಇತ್ತೀಚೆಗೆ ಸಿಯಾಚೀನ್ ನಲ್ಲಿ ಮಂಜಿನಡಿ ಸಿಲುಕಿ ಮೃತಪಟ್ಟ ಯೋಧರಿಗೆ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಯೋಧರೊಬ್ಬರು ಹಂಚಿಕೊಂಡ ಅನುಭವದ ಮಾತು.

ಇದು ಮಾಜಿ ಯೋಧ ಪಿಲಾರು ಪ್ರವೀಣ್ ಶೆಟ್ಟಿ ಅವರು 2003 ರಲ್ಲಿ ಭೂಸೇನೆಯಲ್ಲಿದ್ದ ವೇಳೆ ಸಿಯಾಚಿನ್‍ನಲ್ಲಿ ತಿಂಗಳುಗಳ ಕಾಲ ನಡೆಸಿದ ಕರ್ತವ್ಯದ ವೇಳೆ ಅನುಭವಿಸಿದ ಕ್ಷಣಗಳು. ಶೂನ್ಯ ತಾಪಮಾನದಲ್ಲಿ ಮಂಜಿನ ನಡುವಿನ ದಿನಗಳು, ಕೈ ಕಾಲುಗಳನ್ನು ಸವೆಸುತ್ತವೆ. ತಿಂಗಳ ಕಾಲ ಅಲ್ಲೇ ಇದ್ದು, ವಾತಾವರಣಕ್ಕೆ ಅನುಗುಣವಾದ ಕ್ರಮಗಳನ್ನು ಕೈಗೊಂಡದೇ ಇದ್ದಲ್ಲಿ ಅಡ್ಡ ಪರಿಣಾಮಗಳು ಆಗುತಿತ್ತು. ಅಲ್ಲಿ ತಿನ್ನುವಂತಹ ಹಣ್ಣುಗಳು ಬೆಳೆದರೂ ಹಸಿವಾದಾರೂ ತಿನ್ನಲು ಆಗುತ್ತಿರಲಿಲ್ಲ. ವಿರೋಧಿಗಳ ಜತೆ ಯುದ್ಧ ಮಾಡಲು ಇರದಿದ್ದರೂ, ಚೀನಾ ದೇಶದ ವಿರೋಧಿಗಳ ಚಲನ ವಲನಗಳ ಬಗ್ಗೆ ನಿಗಾ ಇಡುವುದು ಸಿಯಾಚಿನ್ ನಲ್ಲಿರುವ ಸೈನಿಕರ ಕೆಲಸವಾಗಿದೆ. ಹಗ್ಗದ ಮೂಲಕ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗದೇ ಕ್ರಮಿಸಲು ಅಸಾಧ್ಯ. ಕನ್ನಡಿಯಂತಿರುವ ನೆಲದ ಸೀಮಿತ ಪ್ರದೇಶದಲ್ಲಿ ನಿಂತರೆ ಮಾತ್ರ ಬದುಕಬಹುದು. ಮಂಜು ಕರಗುವ ಸ್ಥಳದಲ್ಲಿ ನಿಂತರೆ ಅಪಾಯ ಗ್ಯಾರಂಟಿ. ಆಹಾರವೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಎಸೆಯುವುದನ್ನೇ ಪಡೆದುಕೊಳ್ಳಬೇಕಿತ್ತು.

ಸೈನ್ಯಕ್ಕೆ ಸೇರಿದ ಅದೆಷ್ಟೋ ಟ್ಯಾಂಕರ್‍ಗಳು ಮಂಜಿನಡಿ ಹೂತುಹೋಗಿವೆ. ಪ್ರದೇಶದಲ್ಲಿ ವಾಸವಿದ್ದರೆ 10 ವರ್ಷ ಆಯಸ್ಸು ಕಡಿಮೆಯಾಗುವುದು ಖಚಿತ. ಸಿಯಾಚಿನ್ ದುರಂತದಲ್ಲಿ ಹನುಮಂತಪ್ಪ ಬದುಕಿ ಸಿಕ್ಕಿದ್ದರಿಂದ ದೇಶಾದ್ಯಂತ ಅಲ್ಲಿನ ವಿಚಾರ ಗೊತ್ತಾಯಿತು. ಅಲ್ಲದೆ ಸಾವಿನ ವಿಷಯ ಹೊರಜಗತ್ತಿಗೆ ತಿಳಿಯಿತು. ಇಲ್ಲವಾದಲ್ಲಿ ಸರಿಯಾದ ಮೃತರ ಸಂಖ್ಯೆಯೂ ಮಾಧ್ಯಮಗಳಲ್ಲಿ ಉಲ್ಲೇಖವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೇನಾಧಿಕಾರಿ ಅಪ್ಪು ಶೆಟ್ಟಿ, ವಿಶ್ವ ಹಿಂದುಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷ ಹರಿದಾಸ್ ಮಾಡೂರು ಮುಖ್ಯ ಅತಿಥಿಗಳಾಗಿದ್ದರು.

ವಿ.ಹಿಂ.ಪ ಪ್ರಖಂಡ ಕಾರ್ಯದರ್ಶಿ ನಾರಾಯಣ ಕುಂಪಲ ಸ್ವಾಗತಿಸಿದರು. ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್ ವಂದಿಸಿದರು. ಕುಮಾರಿ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

Exit mobile version