Site icon Ullalavani

ಕಾಂಗ್ರೆಸ್-ಬಿಜೆಪಿ ಮಾರಾಮಾರಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಚುನಾವಣೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಜಂಕ್ಷನ್ನಿನಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.

ಕೈರಂಗಳ ನಿವಾಸಿ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಗೋಪಾಲ ಬಂಗೇರ ಹಾಗೂ ಶ್ರೀಧರ್ ಅಡಪ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಘಟನೆ ವಿವರ:

ಕೈರಂಗಳ ಭಾಗದಲ್ಲಿ ಚುನಾವಣೆ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ಇಂದು ಗಲಾಟೆ ನಡೆದಿದೆ.

ಮುಡಿಪು ಹೊಟೇಲೊಂದರಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭ , ಹೊಟೇಲಿನ ಮೇಲಿರುವ ಬಿಜೆಪಿ ಕಚೇರಿಯಲ್ಲಿದ್ದ ಸುಮಾರು 50 ಕ್ಕೂ ಅಧಿಕ ಕಾರ್ಯಕರ್ತರು ಕುರ್ಚಿ ಹಾಗೂ ಮರದ ಸೋಂಟೆಗಳಿಂದ ಕಾಂಗ್ರೆಸ್ ಪರ ಕೆಲಸ ಮಾಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆಂದು ಶ್ರೀಧರ್ ಹಾಗೂ ಗೋಪಾಲ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಕಚೇರಿಯಲ್ಲಿದ್ದ ಸಂದರ್ಭ ಪೂರ್ವ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಗೋಪಾಲ ಬಂಗೇರ, ಶ್ರೀಧರ ಅಡಪ, ನಾಗೇಶ್, ಪವನ್ ಕುಮಾರ್ , ಕರುಣಾಕರ ಎಂಬವರು ಬಿಜೆಪಿ ಕಾರ್ಯಕರ್ತರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಕೊಣಾಜೆ ಪೊಲೀಸರು ಬಿಜೆಪಿಯ ವಿಜೇಶ್ ನಾಯ್ಕ್, ನಂದರಾಜ್, ಹರಿಪ್ರಸಾದ್, ದಯಾನಂದ, ನಾಗೇಶ್ ಎಂಬವರನ್ನು ವಶಕ್ಕೆ ಪಡೆದುಕೊಂಡರು. ಈ ವೇಳೆ ಠಾಣೆ ಮುಂದೆ 100ಕ್ಕೂ ಅಧಿಕ ಕಾರ್ಯಕರ್ತರು ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣ ಆಯಿತು. ಇತ್ತಂಡಗಳಿಂದ ದೂರು ದಾಖಲಾಗಿದೆ.

Exit mobile version