Site icon Ullalavani

ಸೋಮೇಶ್ವರ, ಕೊಣಾಜೆ ಕುರ್ನಾಡು ಬಿರುಸಿನ ಮತದಾನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 136 ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಶನಿವಾರ ಬೆಳಗ್ಗಿನಿಂದ ಶಾಂತಿಯುತವಾಗಿ ನಡೆದಿದ್ದು, ಕೊಣಾಜೆಯ ಅಡ್ಕರೆ ಮತಗಟ್ಟೆ ಹೊರತುಪಡಿಸಿ ಉಳಿದ ಮತಗಟ್ಟೆಗಳಲ್ಲಿ ಸರಾಸರಿ 200 ರಿಂದ 220 ಮತದಾರರು ಮಧ್ಯಾಹ್ನದ ವೇಳೆಗೆ ತಮ್ಮ ಹಕ್ಕು ಚಲಾಯಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ಜಾರದಗುಡ್ಡೆಯ ಮತಗಟ್ಟೆ ಸಂಖ್ಯೆ 280 ರಲ್ಲಿ ಮತ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಷೇತ್ರದ ಉದ್ದಗಲಕ್ಕೂ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಶಾಂತಿಯ ನೆಮ್ಮದಿ ಸ್ವಾಭಿಮಾನದ ಜೀವನ ನಡೆಸಲು ಜನ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯಾಡಳಿತ ಊರಿಗೆ ಯೋಜನೆಗಳನ್ನು ತರುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲರೂ ಹಕ್ಕನ್ನು ಚಲಾಯಿಸುವುದರೊಂದಿಗೆ ಊರಿನ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು ಎಂದರು.

ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ನೀರುಮಾರ್ಗದಲ್ಲಿ 11, ಕುರ್ನಾಡು 26, ಕೊಣಾಜೆ 34, ಪುದು 27, ಸೋಮೇಶ್ವರ 38, ಸೇರಿದಂತೆ ಒಟ್ಟು 136 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಶನಿವಾರ ದಿನವಾಗಿದ್ದರಿಂದಾಗಿ ಕೂಲಿ ಕಾರ್ಮಿಕ ಮತದಾರರ ಸಂಖ್ಯೆ ಕಡಿಮೆಯಾಗಿತ್ತು.

ಕೊಣಾಜೆಯ ಬೆಳ್ಮ ಅಡ್ಕರೆ ಪ್ರದೇಶದ ಮಂದಿ ರಸ್ತೆ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳದೆ ಬಹಿಷ್ಕರಿಸುವ ಮೂಲಕ ಕೊಣಾಜೆಯ ಅಡ್ಕರೆ ಮತಗಟ್ಟೆಯಲ್ಲಿ ಮತದಾರರು ಕಡಿಮೆಯಾಗಿದ್ದರು. ಕುಂಪಲ ಶಾಲೆಯಲ್ಲಿ 88ರ ಹರೆಯದ ಕೊಲ್ಯ ಕನೀರುತೋಟದ ಸುಶೀಲಾ ಶೆಟ್ಟಿ ಮತ ಚಲಾಯಿಸಿದರೆ, ಮುನ್ನೂರು ಕುತ್ತಾರು ಮತಗಟ್ಟೆಯಲ್ಲಿ ಗಂಗಯ್ಯ 90ರ ಹರೆಯದವರು ಮಕ್ಕಳ ಆಶ್ರಯದಲ್ಲಿ ಹಕ್ಕನ್ನು ಚಲಾಯಿಸಿದರು.

ಕುಂಪಲ ಶಾಲಾ ಮತಗಟ್ಟೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು ಶನಿವಾರ ಆಗಿರುವುದರಿಂದ ಕೂಲಿ ಕಾರ್ಮಿಕರಿಗೆ ಮತದಾನ ಮಾಡಲು ಅನಾನುಕೂಲವಾಗಿದೆ. ಆದರೂ ಅದರ ಮಧ್ಯದಲ್ಲಿ ಮತದಾನ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರ ಕ್ರಿಯಾಶೀಲತೆಯ ಕೆಲಸವನ್ನು ಗೌರವಿಸಿ ಬಿಜೆಪಿ ಅಭ್ಯರ್ಥಿಗಳು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಜಿಲ್ಲೆಯಲ್ಲಿಯೂ ಮತ್ತೆ ಜಿಲ್ಲಾ ಪಂಚಾಯತ್ ಬಿಜೆಪಿ ಪಾಲಾಗಲಿದೆ ಎಂದರು.

Exit mobile version