ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಉಪ್ಪಿನಂಗಡಿ ನೀರಕಟ್ಟೆಯಲ್ಲಿ ಪತ್ತೆಯಾದ ಅನಾಥ ಕಾರು ಮತ್ತು ಅದರೊಳಗೆ ರಕ್ತದ ಕಲೆಗಳು ಕಂಡ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಟೂರಿಸ್ಟ್ ಕಾರು ಚಾಲಕ ಹಾಗೂ ಮಾಲೀಕ ವಿ.ಎ.ಇಸ್ಮಾಯಿಲ್ ಕುರಿತು ಕೊಣಾಜೆ ಠಾಣೆಯಲ್ಲಿ ಅವರ ಪತ್ನಿ ನೆಬೀಸಾ ಅವರು ನಾಪತ್ತೆ ದೂರು ದಾಖಲಿಸಿದ್ದಾರೆ.
ಘಟನೆ ವಿವರ:
ಫೆ.16 ರಂದು ಪಾವೂರು ಇನೋಳಿಯ ದೆಡಿಂಜೆ ಮನೆಯಿಂದ ಇಸ್ಮಾಯಿಲ್ ಅವರು ಬೆಳಿಗ್ಗೆ 8.00 ಗಂಟೆಗೆ ಕೆ.ಎ.20.ಸಿ 3198 ಟೂರಿಸ್ಟ್ ಕಾರಿನಲ್ಲಿ ಮಂಗಳೂರು ಕಡೆಗೆ ಹೊರಟಿದ್ದರು. ಮತ್ತೆ 10.00 ಗಂಟೆ ಸುಮಾರಿಗೆ ಪತ್ನಿ ನೆಬೀಸಾ ಅವರಿಗೆ ಕರೆ ಮಾಡಿ ತಕ್ಷಣ ರೂ. 75,000 ಹಣದೊಂದಿಗೆ ಅಸೈಗೋಳಿಗೆ ಬರಲು ತಿಳಿಸಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದಿದ್ದ ಇಸ್ಮಾಯಿಲ್ ಅವರು ಕರಾವಳಿ ಸೊಸೈಟಿಯಿಂದ ರೂ.1,75,000 ಹಣವನ್ನು ಪಡೆದು ಬಳಿಕ ಪತ್ನಿ ನೆಬೀಸಾ ಅವರಿಂದ ರೂ.75,000 ಹಣ ಸಹಿತ ಒಟ್ಟು 2,50,000 ನಗದಿನೊಂದಿಗೆ ಫರಂಗಿಪೇಟೆಗೆ ಹೋಗಲು ಇದೆ ಎಂದು ತಿಳಿಸಿ ಹೊರಟಿದ್ದರು. ಮತ್ತೆ ಸಂಜೆ 4.00 ಗಂಟೆಗೆ ಕರೆ ಮಾಡಿ ಹಾಸನ ಮತ್ತು ಬೆಂಗಳೂರು ಕಡೆಗೆ ಬಾಡಿಗೆಗೆ ತೆರಳುತ್ತಿದ್ದೇನೆ ನಾಲ್ವರು ಕಾರಿನಲ್ಲಿದ್ದಾರೆ ಎಂದು ತಿಳಿಸಿದ್ದರು. ಆ ಬಳಿಕ ರಾತ್ರಿ 8.40ರ ಸುಮಾರಿಗೆ ಕರೆ ಮಾಡಿ ಕಾರು ಕೆಟ್ಟು ಹೋಗಿದ್ದು, ತನ್ನ ಬಾಡಿಗೆಗೆ ಬಂದವರು ಒಳ್ಳೆಯವರಾಗಿದ್ದಾರೆ. ಅವರೇ ಕಾರನ್ನು ತಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ. 9.30 ರ ಸುಮಾರಿಗೆ ಉಪ್ಪಿನಂಗಡಿ ಸಮೀಪ ಊಟ ಮಾಡುತ್ತಿದ್ದೇವೆ ಎಂದು ಪತ್ನಿಗೆ ತಿಳಿಸಿದ ಇಸ್ಮಾಯಲ್ ಕೊನೆಯದಾಗಿ 11.45ರ ಸುಮಾರಿಗೆ ಕರೆ ಮಾಡಿದವರು ತನ್ನ ಜತೆಗೆ ಇರುವವರು ಯಾರೂ ಒಳ್ಳೆಯವರಲ್ಲ, ಅವರೆಲ್ಲಾ ತನ್ನನ್ನು ಕೊಲ್ಲುವ ಸಂಚು ರೂಪಿಸಿದ್ದಾರೆ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳು’ ಎಂದು ಹೇಳಿ ಕರೆ ಕಟ್ ಮಾಡಿದವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.
ಮಂಗಳವಾರ ರಾತ್ರಿ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದಾಗಿ ಪತ್ನಿ ನೆಬೀಸಾ ಅವರು ಬುಧವಾರ ವಾಪಸ್ಸು ಬರಬಹುದೆಂಬ ನಂಬಿಕೆ ಇಟ್ಟಿದ್ದರು. ಬುಧವಾರ ರಾತ್ರಿವರೆಗೂ ಕಾದು ಕುಳಿತರೂ ಇಸ್ಮಾಯಿಲ್ ಅವರ ಸುಳಿವು ಪತ್ತೆಯಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಉಪ್ಪಿನಂಗಡಿ ನೀರಕಟ್ಟೆಯಲ್ಲಿ ಅನಾಥ ಕಾರು ಪತ್ತೆಯಾದ ಕುರಿತ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದ ಇಸ್ಮಾಯಿಲ್ ಸಂಬಂಧಿಕರು ಅವರ ಪತ್ನಿ ನೆಬೀಸಾ ಅವರಿಗೆ ವಿಚಾರ ತಿಳಿಸಿದ್ದರು. ಗಾಬರಿಗೊಂಡ ನೆಬೀಸಾ ಅವರ ಸಹೋದರ ಬಶೀರ್ ಅವರಿಗೆ ವಿಷಯ ತಿಳಿಸಿದ್ದರು. ಅದರಂತೆ ಬೆಳಗ್ಗಿನಿಂದ ಉಪ್ಪಿನಂಗಡಿ ಭಾಗದಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದಾಗ ಕೊಣಾಜೆ ಠಾಣೆಯಲ್ಲಿ ಮಧ್ಯಾಹ್ನ ವೇಳೆ ನಾಪತ್ತೆ ದೂರು ದಾಖಲಿಸಿದ್ದಾರೆ. ತುಂಬೆ ಟೋಲ್ ಗೇಟ್ ಬಳಿಯ ಸಿ.ಸಿ.ಟಿವಿಯಲ್ಲಿ ಕಾರು ಹೋಗಿರುವ ಕುರಿತು ಯಾವುದೇ ದೃಶ್ಯಗಳು ಸೆರೆಯಾಗಿಲ್ಲ. ಅಲ್ಲದೆ ರಾತ್ರಿ ವೇಳೆ ವಿದ್ಯುತ್ ಇಲ್ಲದೇ ಇದ್ದುರಿಂದ ದೃಶ್ಯಗಳು ಸೆರೆಯಾಗಿಲ್ಲ ಎಂದು ಟೋಲ್ ಗೇಟ್ ಸಿಬ್ಬಂದಿ ತಿಳಿಸಿದ್ದಾರೆ.
ಇಸ್ಮಾಯಿಲ್ -ನೆಬೀಸಾ ದಂಪತಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರನಿದ್ದಾರೆ. ರಿಕ್ಷಾ, ಕಾರು ಹಾಗೂ ಟಾಟ ಸುಮೋ ವಾಹನವನ್ನು ಹೊಂದಿರುವ ಇಸ್ಮಾಯಿಲ್ ಆರ್ಥಿಕವಾಗಿ ಯಾವುದೇ ತೊಂದರೆಯಲ್ಲಿ ಇರಲಿಲ್ಲ ಎಂದು ಸಂಬಂಧಿಕರ ಮೂಲಗಳು ತಿಳಿಸಿವೆ. ಇಸ್ಮಾಯಿಲ್ ಅವರಿಗೆ ನೆಬೀಸಾ ಎರಡನೇ ಪತ್ನಿಯಾಗಿದ್ದು, ಮುಲ್ಕಿಯಲ್ಲಿ ಮೊದಲ ಪತ್ನಿಯಿದ್ದು ಅವರಿಗೂ ಮದುವೆಯಾಗಿರುವ ನಾಲ್ಕು ಮಕ್ಕಳಿದ್ದಾರೆ.