Site icon Ullalavani

ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ: ಮತಯಾಚನೆ ಸಂದರ್ಭ ಬಿಜೆಪಿ ಕಾರ್ಯಕರ್ತರಿಗೆ ಬೆಲ್ಲ ಮತ್ತು ನೀರು ನೀಡುವ ಜನರು ಅದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಕಲ್ಲು ಮತ್ತು ಇಡಿಸೂಡಿ ಹಿಡಿದು ಓಡಿಸುತ್ತಿದ್ದಾರೆ. ಅದಕ್ಕಾಗಿ ಅವರು ರೋಡ್ ಷೋಗಳನ್ನೇ ನಡೆಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಅವರು ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ಸಂಜೆ ಜರಗಿದ ಸೋಮೇಶ್ವರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿದರು.

ಕಳೆದ 10 ದಿನಗಳಿಂದ ಎಂಟು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಮತದಾರ ನೀಡಿದ್ದಾನೆ. ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರ ಮಾಡಿರುವ ಆಶೀರ್ವಾದ ಜಿಲ್ಲೆಯ ಮತದಾರ ಮಾಡಲಿದ್ದಾನೆ. ನಾಲ್ಕು ಕ್ಷೇತ್ರಗಳಲ್ಲಿ ಸಚಿವ ಖಾದರ್ ವಿರುದ್ಧ ಅಲ್ಪಸಂಖ್ಯಾತರು ಕೈಜೋಡಿಸಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ.

ಕಳೆದ ಎರಡು ಅವಧಿಗಳಲ್ಲಿ ಜಿಲ್ಲಾ ಪಂಚಾಯಿತಿ ಬಿಜೆಪಿ ಆಡಳಿತದಲ್ಲಿರುವ ಮೂಲಕ ನಿರ್ಮಲ ಪ್ರಶಸ್ತಿ ಪಡೆದುಕೊಂಡು ದೇಶದಲ್ಲೇ ಹೆಸರನ್ನು ಗಳಿಸಿ ಕಳಂಕ ರಹಿತವಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಅಲ್ಪಸಂಖ್ಯಾತರಿಗೆ ವಿಶೇಷ ಅನುದಾನವನ್ನು ನೀಡುವ ಮೂಲಕ ಪ್ರಾಶಸ್ತ್ಯವನ್ನು ನೀಡಿದೆ. ಆದರೆ ಕಾಂಗ್ರೆಸ್ ಸರಕಾರ ಭಾಗ್ಯಲಕ್ಷ್ಮೀ , ಸಂಧ್ಯಾ ಸುರಕ್ಷಾ ಯೋಜನೆಯನ್ನು ರದ್ದುಗೊಳಿಸಿದೆ. ಅಲ್ಲದೆ ಕೇಂದ್ರ ಸರಕಾರದಿಂದ ಪಂಚಾಯಿತಿಗಳಿಗೆ ಬರುವ ನೇರ ಅನುದಾನವನ್ನು ವಿದ್ಯುತ್ ಬಿಲ್ ಪಾವತಿಸಲು ಮುಖ್ಯಮಂತ್ರಿ ಹೇಳುವುದರಿಂದ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಎಲ್ಲಾ ದಂಧೆಗಳಿಂದ ಹಣ ಗಳಿಸಿರುವ ಕಾಂಗ್ರೆಸ್ ಸರಕಾರ ಮುಂದಿನ ಎರಡು ದಿನಗಳಲ್ಲಿ ಹಣ ಮತ್ತು ಹೆಂಡವನ್ನು ಹಂಚಲಿದೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಜಾಗರೂಕರಾಗಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸುವ ಕಾರ್ಯ ಮಾಡಬೇಕಿದೆ ಎಂದರು.

ಈ ಸಂದರ್ಭ ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮಾಜಿ ಶಾಸಕ ಜಯರಾಮ್ ಶೆಟ್ಟಿ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಹಿರಿಯ ಮುಖಂಡ ಸೀತಾರಾಮ್ ಬಂಗೇರ, ಮೋಹನ್ ರಾಜ್ ಕೆ.ಆರ್, ಅಶ್ರಫ್ ಹರೇಕಳ, ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಚಂದ್ರಹಾಸ್ ಅಡ್ಯಂತಾಯ, ರವೀಂದ್ರಶೆಟ್ಟಿ ಉಳಿದೊಟ್ಟು, ಸೋಮೇಶ್ವರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಧನಲಕ್ಷ್ಮಿ, ತಾ.ಪಂ ಅಭ್ಯರ್ಥಿಗಳಾದ ರಾಮಚಂದ್ರ ಕುಂಪಲ, ರವಿಶಂಕರ್ ಸೋಮೇಶ್ವರ, ಪ್ರಸಿಲ್ಲಾ ಪೆರ್ನಾಂಡಿಸ್, ಲೋಲಾಕ್ಷಿ, ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರ್ವಹಿಸಿದರು.

Exit mobile version