ಕುತ್ತಾರು: ಮುನ್ನೂರು ತಾಲೂಕು ಪಂಚಾಯಿತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಪಿಎಂ ಅಭ್ಯರ್ಥಿಯಲ್ಲೇ ತಿಳಿಯದೆ ಮತಯಾಚಿಸಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಬಳಿಕ ತಬ್ಬಿಬಾದ ಪ್ರಸಂಗ ಕುತ್ತಾರು ಪದವಿನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸೋಮೇಶ್ವರ ಹಾಗೂ ಕೊಣಾಜೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ಅದಕ್ಕೆ ಮೆರುಗು ನೀಡಿ ಮತಯಾಚಿಸುವ ಸಲುವಾಗಿ ಪೂಜಾರಿ ಕುತ್ತಾರು ಜಂಕ್ಷನ್ ಹಾಗೂ ಬೆಳ್ಮ ತಾ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುವ ಸಂದರ್ಭ ಅದೇ ಪ್ರದೇಶದಲ್ಲಿ ಸಿಪಿಎಂ ಅಭ್ಯರ್ಥಿ ಹಾಗೂ ಹಾಲಿ ಮುನ್ನೂರು ಪಂಚಾಯಿತಿ ಸದಸ್ಯೆ ಶಶಿಕಲಾ ಅವರು ಮತಯಾಚಿಸುತ್ತಿದ್ದರು. ಈ ವೇಳೆ ಪೂಜಾರಿ ಅವರು ಎದುರಾದಾಗ ಶಶಿಕಲಾ ಅವರ ಕೈಗೂ ಭಿತ್ತಿಪತ್ರವನ್ನು ನೀಡಿ ` ಬಡವರ ಪಾಲಿನ ಪಕ್ಷ ಕಾಂಗ್ರೆಸ್, ಅದನ್ನು ಗೆಲ್ಲಿಸಿದರೆ ಮಾತ್ರ ನೀವು ಶಾಂತಿಯಿಂದ ಬದುಕಲು ಸಾಧ್ಯ. ಹಾಗೆ ಮಾತನ್ನು ಮುಂದುವರಿಸುತ್ತಿದ್ದಂತೆ ಶಶಿಕಲಾ ಅವರು ಅಭ್ಯರ್ಥಿ ಎಂದು ಹೇಳಲು ಮುಂದಾಗುವಾಗ `ಒಮ್ಮೆ ನಿಲ್ಲಿ’ ಎಂದು ಮಾತನ್ನು ನಿಲ್ಲಿಸುತ್ತಿದ್ದ ಪೂಜಾರಿಯವರು ಕಡೆಯವರೆಗೂ ಪಕ್ಷದ ಕುರಿತು ಮಾತನ್ನು ಮುಂದುವರಿಸುತ್ತಲೇ ಇದ್ದರು.
ಕೊನೆಯ ಘಳಿಗೆಯಲ್ಲಿ ಪೂಜಾರಿಯವರ ಹಿಂದೆ ಇದ್ದ ಕಾರ್ಯಕರ್ತರೊಬ್ಬರು ಅವರು ಸಿಪಿಎಂ ನಿಂದ ತಾ.ಪಂ ಕಣಕ್ಕಿಳಿದಿರುವ ಅಭ್ಯರ್ಥಿ ಎಂದು ಹೇಳುತ್ತಿದ್ದಂತೆ ತಬ್ಬಿಬ್ಬಾಗಿ ಮುಂದೆ ಸಾಗಿದರು.