Site icon Ullalavani

ಕಾಂಗ್ರೆಸ್ ಅತ್ಯಾಧಿಕ ಮತಗಳಿಂದ ಜಯಗಳಿಸುತ್ತದೆ: ಪೂಜಾರಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು :ಜಿಲ್ಲೆಯ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯವರು ನಡೆಸಿರುವ ಅಭಿವೃದ್ಧಿ ಹೀನ ಕೆಲಸಗಳಿಂದ , ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯಭೇರಿ ಬಾರಿಸಲಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ಧುರೀಣ ಹಾಗೂ ಮಾಜಿ ಕೇಂದ್ರ ಸಚಿವ.ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.

ಸೋಮೇಶ್ವರ ಹಾಗೂ ಕೊಣಾಜೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ಅದಕ್ಕೆ ಮೆರುಗು ನೀಡಿ ಮತಯಾಚಿಸುವ ಸಲುವಾಗಿ ಪೂಜಾರಿ ಕುತ್ತಾರು ಜಂಕ್ಷನ್ ಹಾಗೂ ಬೆಳ್ಮ ತಾ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುವ ಸಂದರ್ಭ ಮಾತನಾಡಿದರು.

ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪಟಾಕಿ ಬಿಡುವ ಪರಿಸ್ಥಿಯಲ್ಲಿ ಯಾವ ಪಕ್ಷದವರೂ ಇಲ್ಲ. ಬಿಜೆಪಿಗೆ ಎರಡು ಹಿಂದೆ ಇದ್ದುದೇ ಸಿಕ್ಕಿದೆ. ಕಾಂಗ್ರೆಸ್‍ಗೂ ಅದೇ ಸಿಕ್ಕಿದೆ. ದಿಕ್ಸೂಚಿ ವಾತಾವರಣ ಕಾಣಿಸುತ್ತದೆ. ವಿಧಾನಸಭೆಯಲ್ಲಿ ಅದೇ ಕಾಂಗ್ರೆಸ್‍ನ ಸಂಖ್ಯೆ ಅಷ್ಟೇ ಇದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನ ಸರಕಾರವೇ ಬರುತ್ತದೆ. ಇದು ಸ್ಪಷ್ಟ. ಜನತಾದಳದ ಯಾವ ಅಭ್ಯರ್ಥಿಗಳು ಗೆಲುವು ಸಾಧಿಸದೆ ಅವರಲ್ಲಿ ಬದಲಾವಣೆಯೇ ಇಲ್ಲ.

ಫಲಿತಾಂಶದಿಂದ ಉತ್ಸಾಹದಲ್ಲಿ ಇದ್ದೇನೆ. ಕಾಂಗ್ರೆಸ್ ದೇಶದ ಅಭಿವೃದ್ಧಿ ಮತ್ತು ಶಾಂತಿಗಾಗಿ ದುಡಿಯುವ ಪಕ್ಷ. ಮುಝಾಫರನಗರದಲ್ಲಿ ಕೋಮುಗಲಭೆ ನಡೆಸಿದ ಬಿಜೆಪಿ ಸಂಘಪರಿವಾರ ಚುನಾವಣೆ ಮೊದಲು ಗಲಾಟೆ ನಡೆಸಿದ್ದಾರೆ. ಆ ಬಳಿಕ ಅದರ ಲಾಭದಿಂದ ಗೆಲುವು ಸಾಧಿಸಿದ್ದಾರೆ. ಪ್ರತ್ಯೇಕ ರಾಜ್ಯ , ಸ್ವಾಯತ್ತತ್ತೆ, ಸ್ವಾತಂತ್ರ್ಯವನ್ನು ಬಯಸಿದ ಪಿಡಿಪಿ ಪಕ್ಷವನ್ನು ಕೈಜೋಡಿಸುವ ಮೂಲಕ ದೇಶದ ಕಾನೂನು ಮುರಿದು ಆಡಳಿತ ನಡೆಸುತ್ತಿದೆ. ಇದೇ ರೀತಿಯಲ್ಲಿ ಮುಂದುವರಿದಲ್ಲಿ ಬಿಜೆಪಿ ಸ್ಥಿತಿ ಅಧೋಗತಿಯಾಗಲಿದೆ ಎಂದರು.

ಈ ಸಂದರ್ಭ ಆರೋಗ್ಯ ಸಚಿವ ಯು.ಟಿ.ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಅಭ್ಯರ್ಥಿ ಲಕ್ಷ್ಮೀ ಪೂಜಾರಿ, ಕಳ್ಳಿಗೆ ತಾರನಾಥ ಶೆಟ್ಟಿ, ಟಿ.ಕೆ.ಸುಧೀರ್, ಮಹಾಬಲ ಮಾರ್ಲ, ದಿನೇಶ್ ರೈ, ಪುರಂದರದಾಸ್, ಅರುಣ್ ಕುವೆಲ್ಲೋ, ಕಮಲಾಕ್ಷ ಸಾಲ್ಯಾನ್, ನೀರಜ್ ಪಾಲ್, ಸುಹಾಸಿನಿ ಬಬ್ಬುಕಟ್ಟೆ, ಬಾಝಿಲ್ ಡಿಸೋಜಾ ಸುದರ್ಶನ್ ಶೆಟ್ಟಿ, ಮೋಹನ್ ಶೆಟ್ಟಿ, ಕರುಣಾಕರ ಶೆಟ್ಟಿ, ಡೆನಿಸ್ ಡಿಸೋಜಾ, ಝಕರಿಯಾ ಮಲಾರ್, ಸಲೀಂ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Exit mobile version