Site icon Ullalavani

ಕಬ್ಬಡಿ ಸ್ಪೀರಿಟ್‍ನ ಕುಡ್ಲಕೆಫೆ

ಕೋಸ್ಟಲ್ ವುಡ್ ಸಿನೆಮಾ ರಂಗದಲ್ಲಿ ಇದೀಗ ಡಿಫರೆಂಟ್ ಕಥೆಗಳನ್ನಾಧರಿಸಿದ ಚಿತ್ರಗಳು ಬಿಡುಗಡೆಯಾಗುತ್ತಿದೆ. ಒಂದರ ಮೇಲೊಂದರಂತೆ ಸಾಲು ಸಾಲು ಚಿತ್ರಗಳು ಬೆಳ್ಳಿ ತೆರೆಯಮೇಲೆ ಬರುತ್ತಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ವಿಭಿನ್ನ ಕಥೆಯನ್ನಾಧರಿಸಿದ ಹೊಸ ಚಿತ್ರ. ತಮಗೆ ಆಶ್ರಯವಾದ ವಸ್ತುವನ್ನು ಉಳಿಸುವ ಸಲುವಾಗಿ, ಆಟವೊಂದರಲ್ಲಿ ಗೆದ್ದು ಹಣ ಸಂಪಾದಿಸುವುದು, ಆ ವೇಳೆ ನಡೆಯುವ ಹೋರಾಟ ಎಲ್ಲವೂ ಟೋಟಲಿ ಡಿಫರೆಂಟ್ ಆಗಿ ಮೂಡಿಬಂದಿರುವುದು ಇತ್ತೀಚೆಗೆ ತೆರೆಕಂಡ ಕುಡ್ಲಕೆಫೆ ಸಿನೆಮಾದಲ್ಲಿ

ರಂಜನ್ ಶೆಟ್ಟಿ ಹಾಗೂ ಸೂರ್ಯಮೆನನ್ ನಿರ್ದೇಶನದಲ್ಲಿ ಮೂಡಿಬಂದಿರುವ ಕುಡ್ಲಕೆಫೆ ವಿನೂತನವಾದ ಕಥೆಯನ್ನು ಆಧರಿಸಿದೆ.

 

ಕರಾವಳಿಯಾದ್ಯಂತ 13 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಶಿರೋನಾಮಕ್ಕೂ ಚಿತ್ರದ ಕಥೆಗೆ ಏನು ಸಂಬಂಧ ಅನ್ನೋರು ಈ ಚಿತ್ರವನ್ನು ಒಮ್ಮೆ ನೋಡಲೇ ಬೇಕು. ಶಾಲಾ ದಿನಗಳಲ್ಲಿ ಒಂದಾಗಿ ಇರುತ್ತಿದ್ದ ಮೂವರು ಗೆಳೆಯರು. ತಮ್ಮ ಶಾಲಾ ದಿನಗಳಲ್ಲಿ ಸಮಯ ಕಳೆಯುತ್ತಿದ್ದ ನೆಚ್ಚಿನ ಅಡ್ಡ ಇನ್ನೇನು ಬೇರೆಯವರ ಪಾಲಾಗುತ್ತದೆ ಅನ್ನೋ ಸಂದರ್ಭದಲ್ಲಿ ಅದನ್ನು ಉಳಿಸಿಕೊಳ್ಳಲು ಸ್ನೇಹಿತರೆಲ್ಲ ಲಕ್ಷಾಂತರ ಹಣ ಒಟ್ಟುಗೂಡಿಸಲು ಕಬ್ಬಡ್ಡಿ ತಂಡವನ್ನು ರಚಿಸಿ, ಆಟದ ಮೂಲಕ ಗೆಲುವು ಸಾಧಿಸಿ ಹಣ ಗಳಿಸುವ ಹೋರಾಟ ಚಿತ್ರದ ಕತೆಯಾಗಿದೆ.

ಆಟದ ನಡುವೆ ತಂಡದ ಸದಸ್ಯರೆಲ್ಲರೂ ಅನುಭವಿಸುವ ನೋವು, ಅವಮಾನ, ಆಟವನ್ನು ಗೆಲ್ಲುತ್ತೇವೆ ಅನ್ನೋ ಛಲವನ್ನು ನಿರ್ದೇಶಕರು ಅಘೋಘವಾಗಿ ಚಿತ್ರದಲ್ಲಿ ತೋರಿಸಿದ್ದಾರೆ. ಚಿತ್ರಕತೆ ಎಳೆದ ರೀತಿಯಲ್ಲಿ ಎಲ್ಲೋ ಒಂದು ಕಡೆ ಬೋರ್ ಅನ್ನಿಸಿದರೂ ಕೂಡ ಇನ್ನೊಂದು ದೃಶ್ಯದಲ್ಲಿ ಎನೋ ಒಂದು ರೀತಿಯ ಕುತೂಹಲವನ್ನು ಮೂಡಿಸುತ್ತದೆ.

ಚಿತ್ರದಲ್ಲಿ ಇಂತವರೇ ನಾಯಕ ನಟರು ಅನ್ನೋದು ಎಲ್ಲೂ ಕೂಡ ಗೊತ್ತಾಗುವುದಿಲ್ಲ. ಕಾರಣ ಎಲ್ಲಾ ನಟರಿಗೂ ಕೂಡ ಸಮಾನವಾದ ಪಾತ್ರವನ್ನು ಚಿತ್ರದಲ್ಲಿ ನಿರ್ದೇಶಕರು ನೀಡಿದ್ದಾರೆ. ನವೀನ್.ಡಿ.ಪಡೀಲ್ ಈ ಮೊದಲು ಕಾಮಿಡಿ ಚಿತ್ರಗಳನ್ನೇ ಮಾಡುತ್ತಾರೆ. ಈ ಚಿತ್ರದಲ್ಲಿ ಕಾಮಿಡಿಯ ಜೊತೆಗೆ ವಾಸ್ತವಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ.

ಜ್ಯೋತಿಷ್ ಶೆಟ್ಟಿ, ಕುಸಲ್ದರಸೆ ನವೀನ್ ಡಿ. ಪಡೀಲ್, ರಘು ಪಾಂಡೇಶ್ವರ, ಅಹಾನಾ ಕುಂಬ್ರಾ, ಶೈನ್ ಶೆಟ್ಟಿ, ಸಂತೋಷ್ ಶೆಟ್ಟಿ, ಸುಧೀರ್ ರಾಜ್ ಉರ್ವ, ಅಶೋಕ್ ಶೆಟ್ಟಿ ಅಂಬ್ಲಮೊಗರು, ಕಿಶೋರ್ ಕೊಟ್ಟಾರಿ, ಬಂಟ್ವಾಳ ಜಯ ರಾಮಾಚಾರ್, ತಿಮ್ಮಪ್ಪ ಕುಲಾಲ್, ಭವಾನಿ ಶಂಕರ್, ಶಶಿರಾಜ್ ಕಾವೂರು, ಮನೋಜ್ ಪುತ್ತೂರು, ಶ್ರುತಿ ಶೆಟ್ಟಿ, ಅನುಷಾ ಕೋಟ್ಯಾನ್, ಸನಮ್ ಅಮೀನ್, ಕಾರ್ತಿಕ್ ಕೊಟ್ಟಾರಿ, ಸೂರಜ್ ಸನಿಲ್, ನವೀನ್ ಶೆಟ್ಟಿ ಮಿಜಾರ್ ಮೊದಲಾದವರು ಅಭಿನಯಕ್ಕೆ ನಿಜಕ್ಕೂ ಸೈ ಅನ್ನಬೇಕು.

ಯೋಧ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ಎಲ್ಲೂ ಕೂಡ ಯಾವುದೇ ಡಬ್ಬಲ್ ಮೀನಿಂಗ್ ಡೈಲಾಗ್‍ಗಳಾಗಲಿ, ಆಶ್ಲೀಲ ಸನ್ನಿವೇಶಗಳು ಇಲ್ಲ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ವಿಶಿಷ್ಟ ಕಥೆಯನ್ನಾಧರಿಸಿದ ಕುಡ್ಲಕೆಫೆಯಂತಹ ಚಿತ್ರಗಳು ಇನ್ನು ತುಳುಚಿತ್ರರಂಗದಲ್ಲಿ ಮೂಡಿಬರಬೇಕು ಅನ್ನೋದು ತುಳುಚಿತ್ರರಸಿಕರ ಆಶಯ.

Exit mobile version