Site icon Ullalavani

ವಿದ್ಯಾರ್ಥಿಗಳಿಗೆ ಜಾತಿಯಿಲ್ಲ ಸಮುದಾಯವೇ ಜಾತಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ವಿದ್ಯಾರ್ಥಿಗಳಿಗೆ ಜಾತಿಯಿಲ್ಲ, ಸಮುದಾಯವೇ ಜಾತಿ. ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಜಾತೀ ರಹಿತ, ವರ್ಗ ರಹಿತವಾಗಿ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಹೋರಾಡಬೇಕಾದ ಅಗತ್ಯ ಇದೆ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರಘು ಹೇಳಿದ್ದಾರೆ.

ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅಸಹಜ ಸಾವಿನ ಕುರಿತು ಉನ್ನತಮಟ್ಟದ ತನಿಖೆ ಹಾಗೂ ಹತ್ಯೆಗೆ ಕಾರಣರಾದವರನ್ನು ಬಂಧಿಸಲು ಒತ್ತಾಯಿಸಿ ಮತೀಯವಾದ ಅಳಿಯಲಿ, ಕ್ಯಾಂಪಸ್ ಡೆಮಾಕ್ರಸಿ ಉಳಿಯಲಿ ಎಂಬ ಧ್ಯೇಯ ವಾಕ್ಯದೊಂದಿಗೆ ರೋಹಿತ್ ವೇಮುಲ ಪರ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿಯ ವಿದ್ಯಾರ್ಥಿ, ಯುವಜನ, ಅಧ್ಯಾಪಕ ಮತ್ತು ಪ್ರಗತಿಪರ ಸಂಘಟನೆಗಳು ಕರೆ ನೀಡಿರುವ ರಾಜ್ಯವ್ಯಾಪಿ ವಿಶ್ವವಿದ್ಯಾಲಯ ಬಂದ್‍ನ ಅಂಗವಾಗಿ ಕೊಣಾಜೆ ವಿಶ್ವವಿದ್ಯಾಲಯದ ಮುಖ್ಯದ್ವಾರದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೇಲ್ಜಾತಿಗಳ ವಿದ್ಯಾರ್ಥಿಗಳಿಗೂ ಸಮಸ್ಯೆಗಳಾದಾಗ ಎಲ್ಲಾ ಜಾತಿಯವರು ವಿದ್ಯಾರ್ಥಿಗಳು ಸೇರಿ ಪ್ರತಿಭಟಿಸಬೇಕಾಗಿದೆ. ಈ ನಲೆಯಲ್ಲಿ ವಿಶ್ವವಿದ್ಯಾನಿಲಯ ಎಂಬ ಪರಿಕಲ್ಪನೆಯನ್ನು ಕಲ್ಪಿಸಿಕೊಳ್ಳಬೇಕಾಗಿದೆ.

ಈ ಹಿನ್ನೆಲೆಯಲ್ಲಿ ರೋಹಿತ್ ವೇಮುಲ ಅವರ ಸಾವಿನ ಬಗೆಗಿನ ಚರ್ಚೆಯನ್ನು, ವಿದ್ಯಾರ್ಥಿಗಳಿಗೆ ಅದ ಅನ್ಯಾಯ ಎಂಬ ನೆಲೆಯಲ್ಲಿ ನೋಡಿ ನ್ಯಾಯ ಒದಗಿಸಿಕೊಡುವ ನೆಲೆಯಲ್ಲಿ ಎಲ್ಲರೂ ಹೋರಾಡಬೇಕಿದೆ.

ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಬೇಕಾದ ಅಗತ್ಯ ಇದೆ. ಆ ಮೂಲಕ ನಿಜವಾದ ವಿಶ್ವವಿದ್ಯಾನಿಲಯಗಳೆಂಬ ಮಾತಿಗೆ ಅರ್ಥ ಬರುತ್ತದೆ.

ಯಾವುದೇ ಸಿದ್ಧಾಂತಗಳಿರಲಿ, ಯಾವುದೇ ಸಂಘಟನೆಗಳ ವಿಚಾರಗಳಿರಲಿ ಅಲ್ಲಿ ಚರ್ಚೆ ಮಾಡಲು ಮುಕ್ತತೆ ಮತ್ತು ಸ್ವಾತಂತ್ರ್ಯ ಇರಬೇಕು. ಭಿನ್ನ ಧ್ವನಿ ಇದೆ ಎಂಬ ಕಾರಣಕ್ಕಾಗಿ ಆ ಸಂಘಟನೆಯನ್ನು ದಮನಿಸುವುದು ಅಭಿವ್ಯಕ್ತ ಸ್ವತ್ಯಂತ್ರಕ್ಕೆ ವಿರುದ್ಧ ಮತ್ತು ವಿಶ್ವವಿದ್ಯಾನಿಲಯ ಎಂಬ ಪರಿಕಲ್ಪನೆಗೆ ವಿರುದ್ಧವಾದುದು. ವಿ.ವಿಗಳಿರುವುದು ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಲು ಮತ್ತು ಕಲಿಯಲು . ಅಲ್ಲಿ ಭಿನ್ನ ಧ್ವನಿ ಇದೆ ಎಂದರೆ ಅವರನ್ನು ಕೊಲೆ ಮಾಡುವುದು ಪ್ರಜಾಪ್ರಭುತ್ವದ ನೀತಿಯಿಲ್ಲ.

ಮಂಗಳೂರು ವಿ.ವಿಯಲ್ಲಿ ಬಸ್ಸು ಕೊರತೆ: ರಾಜ್ಯದ ಎಲ್ಲಾ ವಿ.ವಿ. ಗಳಲ್ಲಿ ಸರಕಾರಿ ಬಸ್ಸುಗಳಿವೆ. ಆದರೆ ಮಂಗಳೂರು ವಿ.ವಿಯಲ್ಲಿ ಅಂತಹ ಸೌಲಭ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ಖಾಸಗಿ ಕಾಲೇಜುಗಳಿಗಿಂತ ಮಂಗಳೂರು ವಿ.ವಿ ಯಲ್ಲಿ ಶುಲ್ಕ ಜಾಸ್ತಿಯಿರುವುದು ದುರದೃಷ್ಟಕರ. ಹೈದರಾಬಾದಿನ ವಿ.ವಿಯಲ್ಲಿ ದೌರ್ಜನ್ಯಗಳು ಮಾತ್ರವಲ್ಲ. ಮಂಗಳೂರು ವಿ.ವಿಯಲ್ಲೂ ದಲಿತ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಂಘಟಿತರಾಗಿ ಪ್ರತಿಭಟಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಈ ಸಂದರ್ಭ ಸಂಶೋಧನಾ ವಿದ್ಯಾರ್ಥಿ ಹರೀಶ್, ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಹಂಝ ಕಿನ್ಯಾ, ಪತ್ರಕರ್ತ ಸುರೇಶ್.ಬಿ, ಸಾತ್ವಿಕ್ ಪಿ.ಜಿ. ಎಸ್ ಎಫ್ ಐ ಜಿಲ್ಲಾ ಸಂಘಟಕಿ ಮಾಧುರಿ ಬೋಳಾರ ಮೊದಲಾದವರು ಉಪಸ್ಥಿತರಿದ್ದರು.

Exit mobile version