Site icon Ullalavani

ದೇರಳಕಟ್ಟೆ: ಮ್ಯಾಕ್ಸಿಲೋಫೇಷಿಯಲ್ ಡೇ- ಫೆ.13

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ದಿನಕಳೆದಂತೆ ಅಪಘಾತ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಚಾಲಕರು ನಿಯಮ ಪಾಲಿಸುವ ಜತೆಗೆ ಮೂಲಸೌಕರ್ಯದ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ನಿಟ್ಟೆ ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಹಾಗೂ ಯೆನೆಪೋಯ ದಂತ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಮೌಖಿಕ ಮತ್ತು ಮ್ಯಾಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ಶನಿವಾರ ದೇರಳಕಟ್ಟೆಯ ವಿಂಶತಿ ಭವನದಲ್ಲಿ ಜರಗಿದ ಮ್ಯಾಕ್ಸಿಲೋಫೇಷಿಯಲ್ ಡೇ- ಫೆ.13 ರಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರಿಯಾಶೀಲತೆ ಧಿಕ್ಕಿನಲ್ಲಿ ಜಗತ್ತು ಬದಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದ ಬದಲಾವಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಅಪಘಾತದ ಬಳಿಕ ಗಾಯಾಳುಗಳಿಗೆ ನೀಡಬೇಕಾದ ಚಿಕಿತ್ಸೆಯ ಬಗ್ಗೆ ಅರಿವು ವೈದ್ಯರಿಂದ ಆಗಬೇಕಿದೆ ಎಂದರು.

ಈ ಸಂದರ್ಭ ಜಿಲ್ಲಾ ಸಾರಿಗೆ ಅಧಿಕಾರಿ ಜಿ.ಯಸ್.ಹೆಗ್ಡೆ ಮಾತನಾಡಿ ಯುವಕರೇ ಹೆಚ್ಚಾಗಿ ಅಪಘಾತಗಳಲ್ಲಿ ಬಲಿಯಾಗುತ್ತಿದ್ದಾರೆ. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನಡೆಸುವ ಚಾಲನೆ ಅಪಘಾತಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ 1 ಕೋಟಿ, 60 ಲಕ್ಷ ವಾಹನಗಳಿದ್ದರೆ, ಮಂಗಳೂರಿನಲ್ಲಿ 4,90,000 ವಾಹನಗಳು ಚಲಿಸುತ್ತಿವೆ. ಎರಡು ದಿನದಲ್ಲಿ ಓರ್ವ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾನೆ. ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಅಪಘಾತದ ಸಂಖ್ಯೆ ಹೆಚ್ಚಾಗಿ ಆಗುತ್ತಿರುವುದರಿಂದ, ಬ್ಲೂಟೂತ್ ಮೂಲಕವೂ ಮೊಬೈಲ್ ಬಳಕೆ ಮಾಡುವವರ ಲೈಸನ್ಸ್ ಅನ್ನು ಮೂರು ತಿಂಗಳ ಕಾಲ ರದ್ದು ಮಾಡಲಾಗುವುದು. ಏರ್ ಬ್ಯಾಗ್ ಇದ್ದರೂ ಸೀಟ್‍ಬೆಲ್ಟ್ ಅನ್ನು ಕಡ್ಡಾಯವಾಗಿ ಉಪಯೋಗಿಸಬೇಕಾಗಿದೆ. ಏರ್‍ಬ್ಯಾಗ್‍ಗಳು ಕಾರ್ಯನಿರ್ವಹಿಸದೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ ಎಂದರು.

ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿ ಡಾ.ಸಂಜೀವ್.ಎಂ. ಪಾಟೀಲ್, ಎ.ಬಿ.ಶೆಟ್ಟಿ ದಂತ ಕಾಲೇಜಿನ ಡೀನ್ ಪ್ರೊ.ಡಾ.ಯು.ಯಸ್.ಕೃಷ್ಣ ನಾಯಕ್, ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಡೀನ್ ಪ್ರೊ.ಶ್ರೀಪತಿ ರಾವ್ ಉಪಸ್ಥಿತರಿದ್ದರು. ಡಾ.ಅನಂತನ್, ಡಾ.ಅರವಿಂದ ಕರಿಕಲ್, ಡಾ.ಅರವಿಂದ ರಾವ್ ಸಂಪನ್ಮೂಲ ಅಧಿಕಾರಿಗಳಾಗಿ ಭಾಗವಹಿಸಿದ್ದರು.

ಸ್ನಾತಕೋತ್ತರ ಕಲಿಕಾ ವಿಭಾಗ ನಿರ್ದೇಶಕ ಡಾ.ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಡಾ. ಶತಾದ್ರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಸಂಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಘಟನಾ ಅಧಿಕಾರಿ ಡಾ.ಮುರಲೀ ಮೋಹನ್ ಚೂಂತಾರು ವಂದಿಸಿದರು.

Exit mobile version