Site icon Ullalavani

ಪಾಸ್‍ಪೋರ್ಟ್ ಗೆ ನಕಲಿ ದಾಖಲೆ ನೀಡಿದ ಆರೋಪ: ಆರೋಪಿ ಬಂಧನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ನಕಲಿ ದಾಖಲೆಗಳನ್ನು ನೀಡಿ ಪಾಸ್‍ಪೋರ್ಟ್ ಪಡೆಯಲು ಯತ್ನಿಸಿದ ಹಳೇ ಪ್ರಕರಣದ ಆರೋಪಿಯನ್ನು ಉಳ್ಳಾಲ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಿನ್ಯಾ ಉಕ್ಕುಡದ ಹಿದಾಯತ್ತುಲ್ಲಾ ಮದರಸ ಬಳಿಯ ಮಹಮ್ಮದ್ ಮುದಸ್ಸಿರ್ (22) ಬಂಧಿತ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಉಳ್ಳಾಲ ಠಾಣೆಯಲ್ಲಿ ಪರಿಶೀಲನೆಗಾಗಿ ಬಂದ ಸಂದರ್ಭ ಶಂಕೆ ವ್ಯಕ್ತಪಡಿಸಿದ ಉಳ್ಳಾಲ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ. ಸೊತ್ತು ನಾಶ ಹಾಗೂ ಹಲ್ಲೆ ಪ್ರಕರಣದ ಆರೋಪಿಯಾಗಿದ್ದ ಮುದಸ್ಸಿರ್ ಉಳ್ಳಾಲ ಮೇಲಂಗಡಿ ದರ್ಗಾ ರಸ್ತೆಯ ನಕಲಿ ವಿಳಾಸದೊಂದಿಗೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‍ಪೋರ್ಟ್ ಕಚೇರಿಯಲ್ಲಿ ನೀಡಿದ್ದನು. ಅಲ್ಲಿಂದ ಪೊಲೀಸರ ಪರಿಶೀಲನೆಗಾಗಿ ಉಳ್ಳಾಲ ಠಾಣೆಗೆ ಬಂದಿದ್ದ ಸಂದರ್ಭ ದಾಖಲೆಗಳಿಂದ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಹಳೇ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ. ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ವಿದೇಶಕ್ಕೆ ಪಲಾಯನಗೈದು ವಿಧ್ವಂಸಕ ಕೃತ್ಯ , ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸುವ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಳ್ಳಾಲ ಎಸ್.ಐ ಭಾರತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರವಿಚಂದ್ರ, ರಾಜಾರಾಂ, ಮಹೇಶ್, ಮನೋಹರ್ ಭಾಗವಹಿಸಿದ್ದರು.

Exit mobile version