ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಅಭ್ಯರ್ಥಿಗಳ ಗೆಲುವು ಮತದಾರರಲ್ಲಿ ಆಡುವ ಮಾತು, ನಡವಳಿಕೆಯಿಂದಲೇ ನಿರ್ಧಾರವಾಗುತ್ತದೆ. ಆರೋಪಗಳು ಸ್ವಾಭಾವಿಕ ಅದಕ್ಕೆಲ್ಲಾ ಎದೆಗುಂದದೇ ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ತೊಕ್ಕೊಟ್ಟುವಿನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಕಾಂಗ್ರೆಸ್ ಅಭ್ಯರ್ಥಿ !
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಬಾಲ್ಯದಿಂದಲೇ ಕಾರ್ಯಕರ್ತನಾಗಿದ್ದು, ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಉಳ್ಳಾಲ ಭಾಗದ ಮುಖಂಡನಾಗಿದ್ದ ರಮೇಶ್ ಕೊಲ್ಯ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಬಾರಿಯ ಸೋಮೇಶ್ವರ (1) ರಲ್ಲಿ ತಾಲೂಕು ಪಂಚಾಯಿತಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ತನಗೆ ಅನ್ಯಾಯ ಆಗದಿದ್ದರೂ ಪಕ್ಷ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಸಿಲಿಕಿದೆ. ಇದರಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ ಎಂದಿದ್ದಾರೆ.
ಕಾಲೇಜು ಉಪನ್ಯಾಸಕಿ ಜಿ.ಪಂ ಅಭ್ಯರ್ಥಿ !
ಮೂರು ವರ್ಷಗಳಿಂದ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಶೀದಾ ಭಾನು ಇದೀಗ ಜಿಲ್ಲಾ ಪಂಚಾಯಿತಿ ಅಭ್ಯರ್ಥಿಯಾಗಿ ಕೊಣಾಜೆ ಕ್ಷೇತ್ರದಿಂದ ಕಣದಲ್ಲಿದ್ದಾರೆ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಶೀದಾ ಫೀಲ್ಡ್ ಮಾರ್ಷಿಯಲ್ ಕಾರಿಯಪ್ಪ ಕಾಲೇಜು ಮಡಿಕೇರಿ ಇಲ್ಲಿ 2 ವರ್ಷ ಹಾಗೂ ಸದ್ಯ ಒಂದು ವರ್ಷದಿಂದ ಹಝ್ರತ್ ಸೈಯ್ಯಿದ್ ಮದನಿ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಎಲ್ಲಾ ಧರ್ಮದ ಮಹಿಳೆಯರು ಬೆಳೆಯಬೇಕು. ಶಿಕ್ಷಣ ಪಡೆದು ಸ್ವಂತ ಕಾಲಿನಲ್ಲಿ ನಿಲ್ಲುವಂತಾಗಬೇಕು. ಅದರ ಜತೆಗೆ ಕುಟುಂಬ ನಿರ್ವಹಣೆ ಮಾತ್ರವಲ್ಲ, ರಾಜಕೀಯ ಪ್ರವೇಶ ಮಾಡಿ ಸಮಾಜದ ಅಬಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವ ಉದ್ದೇಶ ಉಪನ್ಯಾಸಕಿಯದ್ದಾಗಿದೆ. ಮಲಾರ್ ಮೂಲದವರಾಗಿರುವ ರಶೀದಾ ಅವರನ್ನು ಉಳ್ಳಾಲಕ್ಕೆ ವಿವಾಹ ಮಾಡಿಕೊಡಲಾಗಿದ್ದು, ಅವರ ತಂದೆ ಮುಸ್ತಾಫ ಈ ಹಿಂದೆ ಪಾವೂರು ಕ್ಷೇತ್ರದ ತಾ. ಪಂ ಸದಸ್ಯರಾಗಿದ್ದರು. ಅವರ ಪ್ರೇರಣೆಯಿಂದಲೇ ರಾಜಕೀಯ ಪ್ರವೇಶ ಮಾಡಿರುವ ರಶೀದಾ ಅವರು ವಿವಾಹಿತೆಯಾಗಿದ್ದು, ಒಂದು ಮಗುವಿನ ತಾಯಿಯೂ ಹೌದು.
ಬಂಡಾಯ ಬಿಸಿ:
ಬಿಜೆಪಿಯ ಮುಖಂಡ ಕಾಂಗ್ರೆಸ್ ಸೇರ್ಪಡೆಗೊಂಡರೆ, ಇತ್ತ ಹಲವು ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ದುಡಿಯುತ್ತಿದ್ದ, ತಾ.ಪಂ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಕಿನ್ಯಾ ಪಂಚಾಯಿತಿ ಸದಸ್ಯ ಹಮೀದ್ ಕಿನ್ಯಾ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದುಡಿದು ನಾಲ್ಕು ಬಾರಿ ಕಿನ್ಯಾ ಪಂಚಾಯಿತಿ ಸದಸ್ಯರಾಗಿ ಹಾಗೂ ಎರಡು ಬಾರಿ ಉಪಾಧ್ಯಕ್ಷರಾಗಿ ಹಾಗೂ ಒಂದು ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಹಮೀದ್ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಿನ್ಯಾ ಭಾಗದಲ್ಲಿ ಚಿರಪರಿಚಿತರು. ಕಡೆಯ ಕ್ಷಣದವರೆಗೂ ತಲಪಾಡಿ -ಕಿನ್ಯಾದಲ್ಲಿ ತಾ.ಪಂ ಅಭ್ಯರ್ಥಿ ಸ್ಥಾನ ಅವರಿಗೆ ಸಿಗುವ ನಿರೀಕ್ಷೆಯಿದ್ದರೂ ಅದು ಹುಸಿಯಾಗಿದೆ. ಶ್ರಮವನ್ನಾದರೂ ಗುರುತಿಸುತ್ತಾರೆಂಬ ವಿಶ್ವಾಸ ಇದ್ದು, ಕಡೆ ಪಕ್ಷ ಬಿ.ಫಾರಂ ಸಲ್ಲಿಕೆ ವೇಳೆ ಬದಲಾವಣೆಯ ನಿರೀಕ್ಷೆ ಇದೆ ಅನ್ನುವ ಅಭಿಪ್ರಾಯ ಹಮೀದ್ ಬೆಂಬಲಿಗರಿಂದ ಕೇಳಿಬಂದಿದೆ.
ಅಭ್ಯರ್ಥಿಗಳು:
ರಶೀದಾ ಬಾನು (ಕೊಣಾಜೆ ಜಿ.ಪಂ.), ಲಕ್ಷ್ಮೀ ಪೂಜಾರಿ (ಸೋಮೇಶ್ವರ ಜಿ.ಪಂ.). ತಾಲೂಕು ಪಂಚಾಯಿತಿ: ಮಹಮ್ಮದ್ ಮೋನು (ಪಾವೂರು), ಅಬ್ದುಲ್ ಜಬ್ಬಾರ್ (ಬೋಳಿಯಾರ್), ಶಶಿ ಪ್ರಭಾ (ಹರೇಕಳ-ಅಂಬ್ಲಮೊಗರು) ಪದ್ಮಾವತಿ ಎಸ್. (ಕೊಣಾಜೆ), ಸಿದ್ದೀಕ್ (ತಲಪಾಡಿ-ಕಿನ್ಯ), ಸುರೇಖ ಚಂದ್ರಹಾಸ್ (ಮಂಜನಾಡಿ(, ನೂರ್‍ಜಹಾನ್ (ಬೆಳ್ಮ), ರಮೇಶ್ ಕೊಲ್ಯ (ಸೋಮೇಶ್ವರ-1), ಪ್ರಮೋದ್ ಕುಮಾರ್ (ಸೋಮೇಶ್ವರ-2).
ಕಾರ್ಯಕ್ರಮದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಜಿ.ಪಂ ಸದಸ್ಯ ಎನ್.ಎಸ್. ಕರೀಂ ಮೊದಲಾದವರು ಇದ್ದರು.