Site icon Ullalavani

ಆಟದ ವಿಚಾರ : ಸ್ನೇಹಿತರ ಗಲಾಟೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು: ಆಟದ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಪರ್ಯಾವಸನಗೊಂಡ ಘಟನೆ ಸೋಮವಾರ ಸಂಜೆ ಪಂಡಿತ್ ಹೌಸಿನ ಪ್ರಕಾಶನಗರದಲ್ಲಿ ಸಂಭವಿಸಿದೆ.

ಪ್ರಕಾಶನಗರದ ಮಹಮ್ಮದ್ ಅಬೀದ್ (25) ಹಾಗೂ ಸ್ಥಳೀಯ ನಿವಾಸಿ ಸುನಿಲ್ (23) ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡವರು. ಇಬ್ಬರು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ:

ಭಾನುವಾರ ಸಂಜೆ ಪ್ರಕಾಶನಗರದ ಸುಮಾರು 20 ಕ್ಕೂ ಅಧಿಕ ಮಂದಿ ಕ್ರಿಕೆಟ್ ಗ್ರೌಂಡಿನಲ್ಲಿ ಹೌಸಿ ಹೌಸಿ ಆಟವನ್ನಾಡುತ್ತಿದ್ದರು. ಈ ಸಂದರ್ಭ ಜತೆಯಾಗಿಯೇ ಆಟವಾಡುತ್ತಿದ್ದ ಖಲಂದರ್ ಮತ್ತು ವಜ್ರೇಶ್ ಯಾನೆ ಚಿನ್ನು ಎಂಬವರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಬಳಿಕ ಅಲ್ಲಿ ಸೇರಿದ್ದ ಯುವಕರೆಲ್ಲರೂ ಅವರನ್ನು ಸಮಾಧಾನಗೊಳಿಸಿದ್ದರು. ಘಟನೆ ಅಲ್ಲಿಗೆ ಸುಖಾಂತ್ಯಗೊಂಡಿದ್ದರೆ ಮತ್ತೆ ಸೋಮವಾರ ಬೆಳಿಗ್ಗೆ ಖಲಂದರ್ ನನ್ನು ಸುನಿಲ್ ಎಂಬಾತ ಪ್ರಶ್ನಿಸಿದ್ದನು. ಈ ಬಗ್ಗೆ ಖಲಂದರ್ ಗೆಳೆಯ ಮಹಮ್ಮದ್ ಆಬೀದ್ ಬಳಿ ವಿಷಯ ತಿಳಿಸಿದ್ದನು. ಅದನ್ನು ಮತ್ತೆ ಆಬೀದ್ ಸಂಜೆ ವೇಳೆ ಪ್ರಶ್ನಿಸಲು ಮುಂದಾದಾಗ ಇಬ್ಬರ ನಡುವೆ ಜಗಳ ನಡೆದು ಇಬ್ಬರು ಪರಸ್ಪರ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಗಾಯಗೊಂಡ ಇಬ್ಬರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತರ ಗಲಾಟೆ ಸಂಜೆ ಹೊತ್ತಿಗೆ ಹಿಂದು-ಮುಸ್ಲಿಂ ಬಣ್ಣವನ್ನು ಪಡೆದುಕೊಂಡು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಉಳ್ಳಾಲ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ತೊಕ್ಕೊಟ್ಟು ಆಸ್ಪತ್ರೆ ಮುಂದೆ ಜಮಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಉಳ್ಳಾಲ ಠಾಣೆಯಲ್ಲಿ ಇತ್ತಂಡಗಳ ದೂರು ದಾಖಲಾಗಿದೆ.

Exit mobile version