Site icon Ullalavani

ರಸ್ತೆಗೆ ಬಿದ್ದ ಹೈಟೆನ್ಶನ್ ತಂತಿ:ತಪ್ಪಿದ ಭಾರೀ ದುರಂತ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕ್ರೇನ್ ಮೂಲಕ ಕಡಿದ ಮರವೊಂದು ವಿದ್ಯುತ್ ಕಂಬಕ್ಕೆ ಉರುಳಿದ ಪರಿಣಾಮ ಹೈಟೆನ್ಶನ್ ತಂತಿ ರಸ್ತೆಯಲ್ಲೇ ಬಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿದ ಘಟನೆ ತೊಕ್ಕೊಟ್ಟು ಸಮೀಪ ಬುಧವಾರ ಸಂಜೆ ವೇಳೆ ನಡೆದಿದೆ.

ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮತ್ತು ಅಗಲೀಕರಣ ಕಾಮಗಾರಿ ತ್ವರಿತ ಗತಿಯಿಂದ ಸಾಗುತ್ತಿದ್ದು, ತೆರವು ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿದೆ.

ಬುಧವಾರ ಬೆಳಿಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆ ಎದುರುಗಡೆಯಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ನೂತನ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ಸಂಜೆ ವೇಳೆ ಅಲ್ಲೇ ಇದ್ದ ಬೃಹತ್ ಗಾತ್ರದ ಮರವೊಂದನ್ನು ಕ್ರೇನ್ ಮೂಲಕ ತೆಗೆಯುತ್ತಿದ್ದಂತೆ ಆಕಸ್ಮಿಕವಾಗಿ ಮರಕ್ಕೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ ನೂತನ ವಿದ್ಯುತ್ ಕಂಬದ ಮೇಲೆ ಉರುಳಿತ್ತು. ಪರಿಣಾಮ ಕಂಬ ತುಂಡಾಗಿ ತಂತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡವಾಗಿ ಬಿದ್ದಿತು. ಈ ವೇಳೆ ಕೇರಳ ಕಡೆಯಿಂದ ಟೂರಿಸ್ಟ್ ಬಸ್ಸೊಂದು ತಂತಿಯ ಮೇಲೆಯೇ ಚಲಿಸಿದಾಗ ಎರಡು ತಂತಿಗಳು ತಾಗಿ ಬೆಂಕಿಯ ಸ್ಪರ್ಶ ಉಂಟಾಯಿತು. ಕೂಡಲೇ ಸ್ಥಳೀಯರು ಹಾಗೂ ರಾ.ಹೆ. ಕಾಮಗಾರಿಯ ಕಾರ್ಮಿಕರು ಎರಡು ಕಡೆಯಿಂದ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದರಿಂದ ಬಸ್ಸಿನ ಮೇಲೆ ಬೀಳುತ್ತಿದ್ದರೆ, ದೊಡ್ಡ ದುರಂತವೇ ಸಂಭವಿಸುತಿತ್ತು. ಅಲ್ಲದೆ ಪಾದಚಾರಿಗಳು ತಂತಿ ಮೇಲೆ ಹೋಗುತ್ತಿದ್ದಲ್ಲಿ ಜೀವಹಾನಿಯೂ ಉಂಟಾಗುತಿತ್ತು.

ಅರ್ಧ ಗಂಟೆ ತಡೆ:

ಘಟನೆಯಿಂದ ಅರ್ಧ ಗಂಟೆಯ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಪೊಲೀಸರು , ಸಾರ್ವಜನಿಕರು, ಹೆದ್ದಾರಿ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಸೇರಿ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Exit mobile version