Site icon Ullalavani

ಉತ್ತಮ ಆರೋಗ್ಯಕ್ಕೆ ಯೋಗ ಶಿಕ್ಷಣ ಮುಖ್ಯ:ಎ.ಬಿ.ಇಬ್ರಾಹಿಂ

ಉಳ್ಳಾಲ್  ನ್ಯೂಸ್ ನೆಟ್ ವರ್ಕ್

ಕೊಣಾಜೆ: ಉತ್ತಮ ಮನಸ್ಸು, ಆರೋಗ್ಯ, ಸಮಾಜದ ಆರೋಗ್ಯದ ಜತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಯೋಗ ಶಿಕ್ಷಣ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಎಲ್ಲರೂ ಅದನ್ನು ದುರ್ಬಳಕೆ ಮಾಡದೆ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಅಭಿಪ್ರಾಯ ಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ,ಯೋಗ ವಿಜ್ಞಾನ ವಿಭಾಗ ಮತ್ತು ಧರ್ಮನಿಧಿ ಯೋಗಪೀಠದ ಆಶ್ರಯದಲ್ಲಿ ದಕ್ಷಿಣ ಕೊರಿಯಾದ ವಾಂಕ್ವಾಂಗ್ ಡಿಜಿಟಲ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ನಾಲ್ಕು ದಿನಗಳ `ಯೋಗ ಥೆರಫಿ’ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪುರಾತನ ಕಾಲದಿಂದಲೇ ಭಾರತದಲ್ಲಿರುವ ಯೋಗ ವಿದ್ಯೆ ಇಂದು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿದ್ದು ಯೋಗದ ಮಹತ್ವನ್ನು ಎಲ್ಲರೂ ಅರಿತುಕೊಂಡಿದ್ದಾರೆ. 5,000 ವರ್ಷಗಳ ಹಿಂದೆ ಯೋಗವನ್ನು ದೇಶದಲ್ಲಿ ಪ್ರತಿಯೊಬ್ಬರೂ ಮೈಗೂಡಿಸಿಕೊಂಡಿದ್ದರು. ಆ ಬಳಿಕ ಕ್ರಮೇಣ ಜನ ಮರೆತಿದ್ದು, ಇತ್ತೀಚೆಗೆ ಪ್ರಧಾನಿಯವರು ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡುವ ಮೂಲಕ ಅಲ್ಲದೆ ಯೋಗ ವಿಜ್ಞಾನ ಇವತ್ತು ಪ್ರಸಿದ್ದಿ ಪಡೆಯುವುದರೊಂದಿಗೆ ಹಲವಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದೆ. ಆದರೆ ಯೋಗದ ಹೆಸರಿನಲ್ಲಿ ವ್ಯಾಪಾರಿಕರಣವು ಕಂಡು ಬರುತ್ತಿದ್ದು ಯೋಗವು ದುರ್ಬಳಕೆಯಾಗದೆ ಜನರಿಗೆ ಸದುಪಯೋಗವಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕೊರಿಯಾದ ವಾಂಕ್ವಾಂಗ್ ವಿವಿಯ ಪ್ರೊ.ಜೋಂಗ್ ಸೂನ್ ಸಿಯೋ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ಇಡೀ ಜಗತ್ತಿಗೆ ಯೋಗದ ಪರಿಚಯವಾಗಿದ್ದು, ಬಹಳಷ್ಟು ದೇಶದ ಜನತೆ ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಸೌತ್ ಕೊರಿಯಾದ ದೇಶದಲ್ಲೂ ಇಂದು ಯೋಗದ ಮಹತ್ವವನ್ನು ಜನತೆ ಅರಿತುಕೊಂಡು ಪ್ರಯೋಜನವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ಯೋಗದಿಂದ ಮನಸ್ಸಿನ ಏಕಾಗ್ರತೆ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಬಹುದು ಮಾತ್ರವಲ್ಲದೆ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಿದೆ. ಮಂಗಳೂರು ವಿವಿಯ ಯೋಗ ವಿಜ್ಞಾನ ವಿಭಾಗದ ಮೂಲಕ ಸರ್ಟಿಫಿಕಟ್ ಕೋರ್ಸ್, ಡಿಪ್ಲಮಾ ಕೋರ್ಸ್‍ಗಳಿದ್ದು ಸಾರ್ವಜನಿಕರು ಇದರ ಪ್ರಯೋಜವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಕಾಯಕ್ರಮದಲ್ಲಿ ಮಂಗಳೂರು ವಿವಿಯ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು, ಯೋಗವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಶರ್ಮಾ ಅವರು ಉಪಸ್ಥಿತರಿದ್ದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ತಿರುಮಲೇಶ್ವರ ಪ್ರಸಾದ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Exit mobile version