ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಲ್ಯ: ಸಂಬಂಧಗಳನ್ನು ರೂಪಿಸುವುದು ದೈವ ಶಕ್ತಿ, ಇಂತಹ ಶಕ್ತಿಯನ್ನು ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯ ಎಂದು ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕ ಹಾಗೂ ಆಧ್ಯಾತ್ಮ ನಾಯಕ ಶ್ರೀ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.
ಅವರು ಸೋಮೇಶ್ವರ ಕೊಲ್ಯದ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಐದನೇ ದಿನ ಶನಿವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ದೇವ ದೇವತೆಗಳಲ್ಲಿ ನಾಗನ ವೈಶಿಷ್ಟ್ಯ ಇದೆ. ಹಿಂದೂಗಳು ಮಾತ್ರವಲ್ಲ ಜೈನರು, ಬುದ್ಧರು ಎಲ್ಲರೂ ನಾಗದೇವರ ಆರಾಧಕರು. ಜಾಗೃತ ಚೈತನ್ಯ ಶಕ್ತಿ ನಾಗದೇವರಲ್ಲಿ ಮಾತ್ರ ಇದೆ. ಶ್ರದ್ಧೆ , ಭಕ್ತಿಯಿಲ್ಲದಿದ್ದಲ್ಲಿ ಅರ್ಥವಿಲ್ಲದ ಜೀವನ ಆಗುವುದು. ವೈವಿಧ್ಯತೆಗಳನ್ನು ಉಳಿಸುವುದು ಎಲ್ಲರ ಆದ್ಯ ಕರ್ತವ್ಯ . ಈ ನಿಟ್ಟಿನಲ್ಲಿ ಕೊಲ್ಯದ ಕ್ಷೇತ್ರದಲ್ಲಿ ನಡೆದ ನಾಗಮಂಡಲೋತ್ಸವದಿಂದ ನಾಗನ ಆರಾಧನೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದಂತಾಗಿದೆ ಎಂದರು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಸ್ವಾಮೀಜಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಪಾದಂಗಳವರು ಆಶೀರ್ವಚನ ನೀಡುತ್ತಾ ನಾಗಮಂಡಲದ ಫಲ ತಿಳಿದಲ್ಲಿ ಉತ್ಕøಷ್ಟ ಫಲ ಸಿಗುತ್ತದೆ. ಸರ್ಪ ಅಂದರೆ ಕೈಕಾಲುಗಳಿಲ್ಲದೆ ಹೊರಳಾಡಿ ನಡೆಯುವ ಜೀವಚರಗಳು. ನಾಗ ಅನ್ನುವುದು ಹೆಡೆ ಹೊಂದಿರುವ ವಿಶೇಷ ಪ್ರಬೇಧ . ಸಂತತಿ ಆರೋಗ್ಯದ ಸಮಸ್ಯೆ ಇರುವವರು ಸರ್ಪ ಪ್ರೀತಿ ನಡೆಸುವುದು ನಂಬಿಕೆ. ಅದರಂತೆ ಜಾತಿ, ಮತ, ಬೇಧವಿಲ್ಲದ ನಾಗನ ಫಲ ಕಂಡವರು ಸಮಾಜದಲ್ಲಿ ಇದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅರಣ್ಯ ಮತ್ತು ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಮಾತನಾಡಿ ನಂಬಿಕೆ ಅನ್ನುವುದು ಎಲ್ಲರಿಗೂ ಪ್ರಜ್ಞಾವಂತರಾಗಿ ಮುಂದುವರಿಯಲು ದಾರಿ. ನಾಗದೇವರ ಆರಾಧನೆಗೆ ಕ್ಷೇತ್ರದಲ್ಲಿ ಒಳ್ಳೆಯ ಫಲಿತಾಂಶ ದೊರೆತಿದೆ. ಸುಂದರ ಸಮಾಜಕ್ಕಾಗಿ ಎಲ್ಲರೂ ಪ್ರಯತ್ನಿಸಿ, ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು. ಈ ನಿಟ್ಟಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಗುಣಗಳನ್ನೆ ಹೆಚ್ಚು ಬೆಳೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ವಹಿಸಿದ್ದರು. ಉಡುಪಿ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ನಾಗಪಾತ್ರಿ ವೇ.ಮೂ.ಸಗ್ರಿ ಗೋಪಾಲಕೃಷ್ಣ ಸಾಮಗ ನಾಗಾರಾಧನೆ ವೈಶಿಷ್ಟ ವಿವರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಶ್ರೀ ಶ್ರೀ ಶ್ರೀ ಸದ್ಯೋಜಾತ ಸ್ವಾಮೀಜಿ, ಸಾಲಿಗ್ರಾಮ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ್.ಜಿ.ಸೋಮಯಾಜಿ, ಚಲನಚಿತ್ರ ನಟ ವಿನೋದ್ ಆಳ್ವ, ಕುಕ್ಕೆ ಸುಬ್ರಹ್ಮಣ್ಯದ ಉದ್ಯಮಿ ವೇಣುಗೋಪಾಲ, ಖ್ಯಾತ ಲೆಕ್ಕಪರಿಶೋಧಕ ಕಿಶೋರ್, ಸ್ಟೇಟ್‍ಬ್ಯಾಂಕ್ ಆಫ್ ಮೈಸೂರ್ ಕದ್ರಿ ಶಿವಭಾಗ್ ಶಾಖೆಯ ಮುಖ್ಯ ವ್ಯವಸ್ಥಾಪಕ ನಾಗರಾಜ್ ರಾವ್, , ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಭವಿಷ್ಯ ನಿಧಿ ಇಲಾಖೆಯ ನಿವೃತ್ತ ಆಯುಕ್ತ ಹಾಗ ವಕೀಲ ಜಿ. ವಿಜಯೇಂದ್ರ ಬೆಂಗಳೂರು, ಪುರುಷೋತ್ತಮ್ ಕೊಟ್ಟಾರಿ, , ಸುವರ್ಣ ಶೆಟ್ಟಿ ಲಿಂಗಮಾರುಗುತ್ತು, ಮಹೇಶ್ ಮೂರ್ತಿ, ಕ್ಷೇತ್ರದ ಧರ್ಮದರ್ಶಿ ಹಾಗೂ ಅರ್ಚಕ ಭಾಸ್ಕರ್ ಐತಾಳ್ , ಪ್ರವೀಣ್.ಯಸ್. ಬಗಂಬಿಲ, ಸೌಮ್ಯಾ .ಬಿ.ಐತಾಳ್, ಕುಸುಮಾ ಮಹಾಬಲ ಉಪಸ್ಥಿತರಿದ್ದರು.
ಸತ್ಯಜಿತ್ ಸುರತ್ಕಲ್ ಸ್ವಾಗತಿಸಿದರು. ಪುರುಷೋತ್ತಮ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ನಾಗಬ್ರಹ್ಮ ಸೇವಾ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹೇಶ್ ಮೂರ್ತಿ ವಂದಿಸಿದರು.
ಈ ಸಂದರ್ಭ ಕ್ಷೇತ್ರದ ಧರ್ಮದರ್ಶಿ ಭಾಸ್ಕರ್ ಐತಾಳ್ ದಂಪತಿ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಕಡಂಬೋಡಿ ಮಹಾಬಲ ಪೂಜಾರಿ ದಂಪತಿ ಸನ್ಮಾನಿಸಿ ಗೌರವಿಸಲಾಯಿತು.