Site icon Ullalavani

ಕೇಂದ್ರ ಸರಕಾರದಿಂದ ಬೀಡಿ ಕಾರ್ಮಿಕರಿಗೆ ಆಪತ್ತು ಬಂದಿದೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಸೋಮೇಶ್ವರ : ಕೇಂದ್ರ ಸರಕಾರದಿಂದ ಬೀಡಿ ಕಾರ್ಮಿಕರಿಗೆ ಆಪತ್ತು ಬಂದಿದೆ. ಕೂಡಲೇ ಅವರಿಗೆ ಪರ್ಯಾಯ ಕೆಲಸ ಒದಗಿಸದೇ ಇದ್ದಲ್ಲಿ 3,000 ಕೋಟಿ ಮಂದಿ ಬೀದಿಗೆ ಬೀಳಲಿದ್ದಾರೆ ಎಂದು ಬೀಡಿ ಫೆಡರೇಶನ್ನಿನ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಸಿಐಟಿಯು ವತಿಯಿಂದ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಆಶ್ರಯದಲ್ಲಿ ಬೀಡಿ ಕೈಗಾರಿಕೆ ಮುಚ್ಚಲ್ಪಟ್ಟರೆ ಬದಲಿ ಪರಿಹಾರ ಒದಗಿಸಿರಿ ಕುರಿತು ಸೋಮೇಶ್ವರ ಗ್ರಾಮ ಪಂಚಾಯತ್‍ನಲ್ಲಿ ನಡೆಸಿದ ಸರಕಾರದ ಸ್ಥಳೀಯ ಸಂಸ್ಥೆಗಳಲ್ಲಿ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

2003ರಿಂದ ದೇಶದಲ್ಲಿ ತಂಬಾಕು ಉತ್ಪನ್ನಗಳ ನಿಷೇಧ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಇದರಿಂದ ಕಾರ್ಮಿಕರು ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕಾರ್ಮಿಕರ ಜೀವನವನ್ನು ಆಪತ್ತಿನಲ್ಲಿ ತಂದಿಟ್ಟಿದೆ. ರಾಜ್ಯದ ಅತಿದೊಡ್ಡ ಪಂಚಾಯಿತಿ ಅನಿಸಿಕೊಂಡಿರುವ ಸೋಮೇಶ್ವರ ಪಂ. ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ. ಅವರ ಗಣತಿಯನ್ನು ನಡೆಸಿ ಪಂಚಾಯಿತಿ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಬೇಕಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ದೇಶಗಳಲ್ಲೇ ತಂಬಾಕು ಉತ್ಪನ್ನಗಳಿಗೆ ನಿಷೇಧವಿಲ್ಲ. ಆದರೆ ಭಾರತದಲ್ಲಿ ಏಕಾಏಕಿ ಕಾರ್ಮಿಕರನ್ನು ಬೀದಿಗೆ ಹಾಕಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ನ ಅಧ್ಯಕ್ಷೆ ಪದ್ಮಾವತಿ.ಯಸ್.ಶೆಟ್ಟಿ, ಕಾರ್ಯದರ್ಶಿ ಜಯಂತ್ ನಾೈಕ್, ಉಪಾಧ್ಯಕ್ಷ ಸುಂದರ್ ಕುಂಪಲ, ಸೋಮೇಶ್ವರ ಪಂಚಾಯಿತಿ ಸದಸ್ಯೆ ನಳಿನಿ ಪಿಲಾರು, ವಿಲಾಸಿನಿ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಕೋಟೆಕಾರಿನಿಂದ ಸೋಮೇಶ್ವರ ಪಂಚಾಯಿತಿ ವಠಾರದವರೆಗೂ ಜಾಥಾ ನಡೆಯಿತು.

ಬೀಡಿ ಕಾರ್ಮಿಕರ ಪಟ್ಟಿ ತಯಾರಿಸಿ
ಬೀಡಿ ಉದ್ಯಮ ನಿಷೇಧದಿಂದ ಜಿಲ್ಲೆಯ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಲಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆ ಹೇಳಿದಂತೆ ಪರ್ಯಾಯ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕಿದೆ. ಅದಕ್ಕಾಗಿ ಸ್ಥಳೀಯ ಪಂಚಾಯಿತಿಗಳು, ಪುರಸಭೆಗಳು ಬೀಡಿ ಕಾರ್ಮಿಕರ ಗಣತಿಯನ್ನು ಮಾಡಿ, ಅಧಿಕಾರಿ ವರ್ಗಕ್ಕೆ ವರದಿ ಸಲ್ಲಿಸಬೇಕು ಎಂಬ ಒತ್ತಾಯವನ್ನು ಬೀಡಿ ಕಾರ್ಮಿಕರು ಸೋಮೇಶ್ವರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅವರಲ್ಲಿ ಮಾಡಿಕೊಂಡರು. ಬಳಿಕ ಪಂಚಾಯಿತಿ ವತಿಯಿಂದ ಬೀಡಿ ಕಾರ್ಮಿಕರಿಗೆ ಆಗಬೇಕಾದ ಕೆಲಸಗಳ ಮನವಿಯನ್ನು ಸೋಮೇಶ್ವರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದರು.

Exit mobile version