Site icon Ullalavani

ಸ್ಕೌಟ್-ಗೈಡ್ಸ್ ಶಾಲೆಯಲ್ಲಿದ್ದರೆ ಅದು ಸಣ್ಣ ಮಟ್ಟಿನ ಪೊಲೀಸ್ ಠಾಣೆಯಿದ್ದಂತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಪಾವೂರು: ಸ್ಕೌಟ್ ಮತ್ತು ಗೈಡ್ಸ್ ಶಾಲೆಯಲ್ಲಿದ್ದರೆ ಅದು ಸಣ್ಣ ಮಟ್ಟಿನ ಪೊಲೀಸ್ ಠಾಣೆಯಿದ್ದಂತೆ ಎಂದು ಪಾವೂರು ಸರ್ಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಮೋನು ಅಭಿಪ್ರಾಯಪಟ್ಟರು.

ಸ್ಥಳೀಯ ಸಂಸ್ಥೆ ವತಿಯಿಂದ ಪಾವೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಯೋಜಿಸಲಾಗಿರುವ ಸ್ಕೌಟ್-ಗೈಡ್ಸ್, ಕಬ್ ಬುಲ್ ಬುಲ್ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಪಾವೂರು ಗ್ರಾಮಕ್ಕೆ ಸರ್ಕಾರಿ ಪ್ರೌಢ ಶಾಲೆಯ ಬೇಡಿಕೆಯಿದ್ದ ಸಂದರ್ಭ ಹಲವು ಬಾರಿ ಗ್ರಾಮಸ್ಥರು ಮಾಡಿದ ಮನವಿ ಫಲ ನೀಡಿರಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಗಾಡಿಗದ್ದೆ ಶಾಲೆಯ ಸ್ಕೌಟ್-ಗೈಡ್ಸ್ ಮಕ್ಕಳು ಅಂದಿನ ಶಾಸಕ ಯು.ಟಿ.ಫರೀದ್ ಅವರಿಗೆ ಮಾಡಿದ ಮನವಿಯ ಪರಿಣಾಮವಾಗಿ ಪ್ರೌಢ ಶಾಲೆ ಮಂಜೂರುಗೊಂಡಿತ್ತು ಎಂದು ಹೇಳಿದರು.

ವ್ಯಕ್ತಿ ಕ್ರಿಯಾಶೀಲನಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ, ಅಂತಹ ಕ್ರಿಯಾಶೀಲತೆ, ಶಿಸ್ತು, ಇತರರೊಂದಿಗೆ ಹೇಗೆ ಬೆರೆಯಬೇಕು ಎನ್ನುವ ತರಬೇತಿ ಸ್ಕೌಟ್-ಗೈಡ್ಸ್‍ನಲ್ಲಿ ಸಿಗುತ್ತದೆ ಎಂದು ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಶಂಕರನಾಂದ ಎನ್.ಇನವಳ್ಳಿ ಹೇಳಿದರು.

ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಜಿ.ಕಜೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಹ್ಮದ್ ಅಬ್ಬಾಸ್, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ನಿರ್ದೇಶಕಿ ಚಂದ್ರಕಲಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕೆ.ಎಸ್, ಶಿಕ್ಷಕ ಕರುಣಾ, ಪಾವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ, ಸದಸ್ಯ ಐ.ಬಿ.ಸಾದಿಕ್, ಕಬ್ ಬುಲ್ ಬುಲ್ ನಾಯಕ ಪುಷ್ಪರಾಜ್ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಮಜೀದ್ ಮಾಸ್ಟರ್ ಮಲಾರ್ ಸ್ವಾಗತಿಸಿದರು. ಸ್ಕೌಟ್-ಗೈಡ್ಸ್ ನಾಯಕ ನೆಲ್ಸನ್ ಕಾರ್ಯಕ್ರಮ ಮುನ್ನೋಟ ಓದಿದರು. ಸ್ಕೌಟ್ ಮಾಸ್ಟರ್ ಪ್ರತೀಪ್ ವಂದಿಸಿದರು. ಗೀತಾ ಜುಡಿತ್ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು.

`ಸ್ಕೌಟ್-ಗೈಡ್ಸ್, ಕಬ್ ಬುಲ್‍ಬುಲ್ ಮಕ್ಕಳು ಹೊಸ ಊರಿನಲ್ಲಿ ಹೊಸತುಗಳ ನಡುವೆ ಶಿಬಿರ ಸಂದರ್ಭ ದಿನ ಕಳೆಯಬೇಕಿದ್ದು ಹಲವು ಸಮಸ್ಯೆಗಳು ಎದುರಾದರೂ ಜೀವನದಲ್ಲಿ ಅಜರಾಮರವಾಗಿರುತ್ತದೆ, ಇಂತಹ ಶಿಬಿರಗಳು ಕನಿಷ್ಟ ಸೌಲಭ್ಯ ಇಲ್ಲದ ಶಾಲೆಗಳಲ್ಲಿ ನಡೆದರೆ ಉತ್ತಮ’
ಡಾ.ಪ್ರಶಾಂತ್ ಕೆ.ಎಸ್. ಮುಖ್ಯ ಶಿಕ್ಷಕ, ಪಾವೂರು ಶಾಲೆ.

Exit mobile version