Site icon Ullalavani

ಸಹೋದರನಿಂದ ಸಹೋದರಿ ಕೊಲೆಯತ್ನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಸಹೋದರನೋರ್ವ ಪತ್ನಿ ಜತೆಗೆ ಸೇರಿಕೊಂಡು ಸಹೋದರಿಯನ್ನು ತೆಂಗಿನಕಾಯಿ ಸಿಪ್ಪೆ ಕೀಳುವ ಯಂತ್ರದಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಭಾನುವಾರ ಮಾಡೂರಿನಲ್ಲಿ ನಡೆದಿದೆ.

ಮಾಡೂರು ನಿವಾಸಿ ರಾಧಾ (45) ಕೊಲೆ ಯತ್ನಕ್ಕೊಳಗಾದವರು. ಇವರ ಕಿರಿಯ ಸಹೋದರ ಕೇಶವ ಮತ್ತು ಆತನ ಪತ್ನಿ ಅಕ್ಷತಾ ಎಂಬವರು ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ.

ಘಟನೆ ವಿವರ:

ಮಾಡೂರು ನಿವಾಸಿ ರಾಧಾ ಮಾಡೂರಿನ ಮನೆಯಲ್ಲಿದ್ದ ಸಂದರ್ಭ ಭಾನುವಾರ ಬೆಳಿಗ್ಗೆ ಸಹೋದರ ಕೇಶವ ಮತ್ತು ಆತನ ಪತ್ನಿ ಬಂದಿದ್ದರು. ಮನೆಗೆ ಬಂದವರು ತನಗೆ ಸೇರಿದ ಸಾಮಗ್ರಿಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದ್ದರು. ಅದಕ್ಕೆ ರಾಧಾ ಅವರು ಸಮ್ಮತಿಯನ್ನು ಸೂಚಿಸಿದ್ದರು. ಈ ವೇಳೆ ಕೇಶವ ಮನೆಯಲ್ಲಿದ್ದ ತೆಂಗಿನಕಾಯಿ ಸಿಪ್ಪೆ ಕೀಳುವ ಯಂತ್ರವನ್ನು ಕೈಗೆ ತೆಗೆದುಕೊಂಡು ಏಕಾಏಕಿ ರಾಧಾ ಅವರ ತಲೆಗೆ ಚುಚ್ಚಿ ಕೊಲೆಗೆ ಯತ್ನಿಸಿದ್ದನು. ಆದರೆ ರಾಧಾ ಅವರು ಕೈಯಲ್ಲಿ ತಡೆದಾಗ ಅದು ಕೈಗೆ ತಗಲಿದೆ. ಬಳಿಕ ಮನೆಯಿಂದ ಹೊರ ಓಡಿಬಂದವರು ಸ್ಥಳೀಯರ ನೆರವನ್ನು ಕೋರಿದ್ದಾರೆ. ಕೂಡಲೇ ಹಲ್ಲೆಕೋರ ದಂಪತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕೈಗೆ ಗಾಯಗೊಂಡ ರಾಧಾ ಅವರನ್ನು ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರು ಸೆಂಟ್ಸ್ ಜಾಗದ ತಗಾದೆ : ರಾಧಾ, ಕೇಶವ್ ಸೇರಿ ಒಟ್ಟು ಆರು ಜನ ಮಕ್ಕಳು. ಅವರ ಹೆತ್ತವರಿಗೆ ಮಾಡೂರಿನಲ್ಲಿ ಐದು ಸೆಂಟ್ಸ್ ಜಾಗವಿದೆ. ಅದರಲ್ಲಿ ರಾಧಾ ಮತ್ತು ಅವರ ಅಸೌಖ್ಯದಿಂದ ಬಳಲುತ್ತಿರುವ ಓರ್ವ ಸಹೋದರ ವಾಸಿಸುತ್ತಿದ್ದಾರೆ. ಈ ಹಿಂದೆ ಕೇಶವ್ ಕೂಡಾ ಪತ್ನಿ ಜತೆಗೆ ಅದೇ ಮನೆಯಲ್ಲಿ ವಾಸವಿದ್ದರು. ಆದರೆ ಮನೆ ಮತ್ತು ಜಾಗವನ್ನು ತನಗೆ ನೀಡಬೇಕೆಂದು ಆಗಾಗ್ಗ ಜಗಳ ನಡೆಸುತ್ತಿದ್ದ ಕೇಶವ್ ಒಂದು ವರ್ಷದಿಂದ ಅಡ್ಕ ಸಮೀಪ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆ ಬಳಿಕ ಅಸೌಖ್ಯದಿಂದ ಇರುವ ಸಹೋದರನ ಜವಾಬ್ದಾರಿಯೊಂದಿಗೆ ಮನೆಯ ಉಸ್ತುವಾರಿಯನ್ನು ಮನೆ ಕೆಲಸ ನಿರ್ವಹಿಸುತ್ತಾ ರಾಧಾ ಅವರು ನೋಡಿಕೊಳ್ಳುತ್ತಿದ್ದಾರೆ. ಇದೀಗ ಮತ್ತೆ ಜಾಗದ ವಿಚಾರಕ್ಕೆ ಸಂಬಂಧಿಸಿ ಸಹೋದರಿಯ ಕೊಲೆಗೆ ಕೇಶವ ಯತ್ನಿಸಿದ್ದಾನೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version