Site icon Ullalavani

ಬೋಳಿಯಾರು ವಿವಾಹಿತೆ ಆತ್ಮಹತ್ಯೆ: ಪತಿ ಕಿರುಕುಳ ಆರೋಪ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬೋಳಿಯಾರು: ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ರಂತಡ್ಕ ಎಂಬಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಪತಿ ಕಿರುಕುಳಕ್ಕೆ ನೊಂದು ಆಕೆ ಆತ್ಮಹತ್ಯೆಗೈದಿರುವ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.


ಬೋಳಿಯಾರು ರಂತಡ್ಕ ನಿವಾಸಿ ಇಕ್ಬಾಲ್ ಎಂಬವರ ಪತ್ನಿ ಸಫಿಯಾ(25) ಆತ್ಮಹತ್ಯೆಗೆ ಶರಣಾದವರು. ಮುಡಿಪುವಿನಲ್ಲಿರುವ ಹೊಟೇಲ್ ಮುಚ್ಚಿ ಇಕ್ಬಾಲ್ ಅವರು ಮನೆಗೆ ಹಿಂತುರಿಗಿದಾಗ ಮನೆಯ ಬಾಗಿಲು ಮುಚ್ಚಿತ್ತು. ಸಂಶಯಗೊಂಡು ಬಾಗಿಲು ಒಡೆದು ಒಳನೋಡಿದಾಗ ಕೋಣೆಯೊಂದರಲ್ಲಿ ಸಫಿಯಾ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೈದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಪತಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

ಕುತ್ತಾರು ಸುಭಾಷನಗರ ನಿವಾಸಿ ಸಫಿಯಾ ಮೂರೂವರೆ ವರ್ಷಗಳ ಹಿಂದೆ ರಂತಡ್ಕದ ಇಕ್ಬಾಲ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 2ರ ಹರೆಯದ ಹೆಣ್ಣು ಮಗು ಇದೆ. ಸಫಿಯಾ ಆತ್ಮಹತ್ಯೆಗೆ ಪತಿ ಇಕ್ಬಾಲ್ ಕಿರುಕುಳವೇ ಕಾರಣ ಎಂದು ಆಕೆ ಸಂಬಂಧಿಕರು ಇಕ್ಬಾಲ್ ಮನೆಮುಂದೆ ಜಮಾಯಿಸಿದ್ದು, ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ ಆಯಿತು. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಉದ್ರಿಕ್ತರನ್ನು ಸಮಾಧಾನಿಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಇಕ್ಬಾಲ್ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

Exit mobile version