ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಇರಾ: ಜಿಲ್ಲೆಯಲ್ಲಿ ಫಾರ್ಮಾ ಪಾರ್ಕ್ (ಸಮೂಹ ಔಷಧ ಉತ್ಪಾಧನಾ ಕೇಂದ್ರಗಳ) ರಚನೆಗೆ ಇರಾ ಗ್ರಾಮದ ಕೆಐಎಡಿಬಿಯ ಸ್ಥಳವನ್ನು ನಿಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರುಗಳ ಸಹಿತ ಇಲಾಖೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ ಎಂದು ರಾಜ್ಯ ಕೈಗಾರಿಕಾ ಇಲಾಖೆಗಳ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್ ಹೇಳಿದರು.
ಅಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿ ಔಷಧ ಮತ್ತು ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರ ಹಾಗೂ ಕೆಐಎಡಿಬಿ ಅಧಿಕಾರಿಗಳ ನಿಯೋಗ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿರುವ ಕೆಐಎಡಿಬಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ರಾಜ್ಯದ ಔಷಧ ನಿಯಂತ್ರಕ ರಘುರಾಂ ಭಂಡಾರಿ ಮಾತನಾಡಿ ಎಷ್ಟರಮಟ್ಟಿಗೆ ಹಾಗೂ ಯಾವ ರೀತಿಯಲ್ಲಿ ಘಟಕಗಳನ್ನು ಸ್ಥಾಪಿಸಬಹುದೆಂಬ ಉದ್ದೇಶವನ್ನು ಮುಂದಿಟ್ಟು ಸ್ಥಳಕ್ಕೆ ಭೇಟಿ ನೀಡಿ ವರದಿ ಸಂಗ್ರಹಿಸಿದ್ದೇವೆ. ಒಂದು ಲಕ್ಷ ಕೋಟಿ ರೂ.ಗಳ ಔಷಧದ ರಫ್ತು ದೇಶದಿಂದ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಒಲವು ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮುಂದಾಗಿದೆ. ಫೆ.3,4,5 ರಂದು ರಾಜ್ಯದಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶದಲ್ಲಿ ಘಟಕ ಸ್ಥಾಪಿಸಲು ಹೂಡಿಕೆಗೆ ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಸ್ಥಳದ ವಿವರಣೆಯನ್ನು ನೀಡಲಾಗುವುದು. ಘಟಕಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲಾಗುವುದು ಹಾಗೂ ಇದರಿಂದ ಘಟಕಗಳಿಗೆ ಅನುಕೂಲವಾಗಲಿದೆ ಎಂದರು.
ಕರ್ನಾಟಕ ಔಷಧ ಮತ್ತು ಔಷಧೀಯ ಉತ್ಪಾಧನೆಗಳ ಅಸೋಸಿಯೇಶನ್‍ನ ಕಾರ್ಯದರ್ಶಿ ಹರೀಶ್, ಪ್ಲಾಸ್ಟಿಕ್ ಉತ್ಪಾಧನೆ ಮತ್ತು ವ್ಯಾಪಾರಿಗಳ ಅಸೋಸಿಯೇಶನ್‍ನ ಅಧ್ಯಕ್ಷ ಬಿ.ಎ ನಝೀರ್, ಸುಳ್ಯ ಕೆವಿಜೆ ಆಯುರ್ವೇದ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಲೀಲಾಧರ್, ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ರಾಮ್ ಮೋಹನ್ ಪೈ, ಸದಸ್ಯರಾದ ಸುರೇಶ್ ನಾಯಕ್, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಉಮರ್ ಪಜೀರು, ಕಾಂಗ್ರೆಸ್ ಮುಖಂಡ ನಾಸಿರ್ ನಡುಪದವು ಇದ್ದರು.
ಸಚಿವ ಯು.ಟಿ. ಖಾದರ್ ಅವರ ಮಹತ್ವಾಕಾಂಕ್ಷೆಯ ಫಾರ್ಮಾಪಾರ್ಕ್ ನಿರ್ಮಾಣಗೊಂಡಲ್ಲಿ ಇರಾ ಗ್ರಾಮದ ಆಸುಪಾಸಿನ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸುವುದಲ್ಲದೆ ಪಂಚಾಯಿತಿ ಆದಾಯವೂ ಹೆಚ್ಚುವುದು.
ಅಬ್ದುಲ್ ರಝಾಕ್ ಕುಕ್ಕಾಜೆ