Site icon Ullalavani

ಅವಳಿ ಜಿಲ್ಲೆಯ ಕುಖ್ಯಾತ ಜಾನುವಾರು ಕಳ್ಳರ ಸೆರೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಜಾನುವಾರುಗಳನ್ನು ಕಳವುಗೈಯ್ಯಲು ಕಾರೊಂದರಲ್ಲಿ ಹೊಂಚು ಹಾಕುತ್ತಿದ್ದ ಮೂವರು ಕುಖ್ಯಾತ ಜಾನುವಾರು ಚೋರರನ್ನು ಉಳ್ಳಾಲ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಮಂಗಳವಾರ ತಡರಾತ್ರಿ 3.30ಕ್ಕೆ ಬಂಧಿಸಿದ್ದು, ಅವರಿಂದ ಡಕಾಯಿತಿಗೆ ಬಳಸಲಾಗುತ್ತಿದ್ದ ತಲವಾರು, ಮೆಣಸಿನ ಹುಡಿ, ಹಗ್ಗ ಮೊದಲಾದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಮುಖ ಆರೋಪಿ ಚೆಂಬುಗುಡ್ಡೆಯ ಇರ್ಷಾದ್ (30) ಹಾಗೂ ಫರಿಂಗಿಪೇಟೆಯ ಇಮ್ರಾನ್(24), ಮಂಜನಾಡಿ ಕಲ್ಕಟ್ಟದ ಮುತಲಿಬ್ (35) ಬಂಧಿತರು. ಇವರ ಜತೆಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ತವೇರಾ ಕಾರಿನ ನಂಬರ್ ಪ್ಲೇಟನ್ನು ಬದಲಿಸಿ ಐವರ ತಂಡ ತಲಪಾಡಿ ಭಾಗದಲ್ಲಿ ಜಾನುವಾರು ಕಳವು ನಡೆಸಲು ಹೊಂಚುಹಾಕುತ್ತಿದ್ದ ಸಂದರ್ಭ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ದನ, ಆಡು, ಕುರಿ ಹಾಗೂ ಸರ ಕಳವು ಜಾಲದಲ್ಲಿ ಸಕ್ರಿಯವಾಗಿದ್ದು, ಸೋಮವಾರ ರಾತ್ರಿ ವೇಳೆ ಮನೆಮಂದಿಗೆ ಹೆದರಿಸಿ ಜಾನುವಾರು ಕಳವಿಗೆ ಯತ್ನಿಸಲು ತೆರಳುತ್ತಿದ್ದಾಗ ಸೆರೆ ಸಿಕ್ಕಿದ್ದಾರೆ.

ಚೆಂಬುಗುಡ್ಡೆಯ ಇರ್ಷಾದ್ ವಿರುದ್ಧ ದ.ಕ ಉಡುಪಿ ಹಾಗೂ ಕಾಸರಗೋಡಿನಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳಿವೆ. ಜಾನುವಾರು ಕಳವು ಸಹಿತ ಸರ ಕಳವು ಜಾಲದಲ್ಲಿ ಸಕ್ರಿಯನಾಗಿದ್ದ ಈತ ಉಳ್ಳಾಲ ಠಾಣೆಯಲ್ಲಿ ವಾರೆಂಟ್ ಹೊಂದಿದ್ದರೂ ತಲೆಮರೆಸಿಕೊಂಡಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದ. ಇತರೆ ಇಬ್ಬರು ಆರೋಪಿಗಳ ವಿರುದ್ಧವೂ ಹಲವು ಕಳವು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ಇದೆ. ಇತ್ತೀಚೆಗೆ ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಬಳಿ ಪುರುಷೋತ್ತಮ್ ಎಂಬವರ ಮನೆಮಂದಿಗೆ ಬೆದರಿಸಿ ಹಾಗೂ ಮಂಜನಾಡಿ ಕಲ್ಕಟ್ಟದಲ್ಲಿ ನಡೆದ ಜಾನುವಾರು ಕಳವು ಪ್ರಕರಣದಲ್ಲಿ ಆರೋಪಿಗಳು ಸಕ್ರಿಯರಾಗಿದ್ದರು.

ಸಿನಿಮೀಯ ಮಾದರಿಯಲ್ಲಿ ದಾಳಿ:

ಖಚಿತ ಮಾಹಿತಿ ಪಡೆದ ಪೊಲೀಸರು ತಮ್ಮ ವಾಹನದಲ್ಲಿ ತೊಕ್ಕೊಟ್ಟುವಿನಿಂದ ಬೆನ್ನಟ್ಟಲು ಆರಂಭಿಸಿದ್ದರು. ಆದರೆ ಆರೋಪಿಗಳು ಅಮಿತ ವೇಗದಲ್ಲಿ ತೆರಳಿದ್ದರಿಂದಾಗಿ ತಲಪಾಡಿ ಸಮೀಪ ಅವರನ್ನು ಅಡ್ಡಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಅಲ್ಲಿಂದ ಮತ್ತೆ ಓಡಿದ ಆರೋಪಿಗಳ ಬೆನ್ನಟ್ಟಿದ ಪೊಲೀಸರು ಮೂವರನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.

ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಶಾಂತರಾಜು, ಸಂಜೀವ ಪಾಟೀಲ್ ಹಾಗೂ ಎಸಿಪಿ ಕಲ್ಯಾಣಿ ಶೆಟ್ಟಿ ಕೊಣಾಜೆ ಠಾಣಾಧಿಕಾರಿ ಅಶೋಕ್ ಅವರ ಸಹಭಾಗಿತ್ವದಲ್ಲಿ ಉಳ್ಳಾಲ ಎಸ್.ಐ ಭಾರತಿ , ಅಪರಾಧ ವಿಭಾಗದ ರಾಜೇಂದ್ರ ಹಾಗೂ ಸಿಬ್ಬಂದಿ ವಿಜಯರಾಜ್, ಮೋಹನ್, ರವಿಚಂದ್ರ, ರಾಜಾರಾಂ, ಮಹೇಶ್, ರಂಜಿತ್, ದಿನೇಶ್, ಲಿಂಗರಾಜು, ಪ್ರಶಾಂತ್, ಸತೀಶ್, ರಾಮಚಂದ್ರ, ಕಲ್ಲಪ್ಪ, ಸುನಿಲ್ ಭಾಗವಹಿಸಿದ್ದರು.

Exit mobile version