ಮಂಗಳೂರು: ಕಾಟಿಪಳ್ಳದ ಎರಡನೇ ಅಡ್ಡರಸ್ತೆಯಲ್ಲಿನ ಕೆಲ ಮನೆಗಳ ಮೇಲೆ ಪ್ರೈಂ ಟೈಂನಲ್ಲಿ ಬೀಳುತ್ತಿದ್ದ ಜಲ್ಲಿಕಲ್ಲುಗಳ ಎಸೆತ ನಿನ್ನೆ ಇದ್ದಕ್ಕಿದ್ದಂತೆ ನಿಂತುಬಿಟ್ಟಿದೆ. ಇಲ್ಲಿನ ಕೆಲ ಮನೆಗಳ ಮೇಲೆ 6-30ರಿಂದ 7-30ರ ಅವಧಿಯಲ್ಲಿ ಬೀಳುತ್ತಿದ್ದ ಜಲ್ಲಿ ಕಲ್ಲುಗಳು ಸ್ಥಳೀಯ ಜನರಲ್ಲಿ ಅವ್ಯಕ್ತ ಭಯವೊಂದನ್ನು ಹುಟ್ಟಿಸಿದ್ದವು.
ನಾಲ್ಕು ದಿಕ್ಕುಗಳಿಂದ ತೂರಿಬರುತ್ತಿದ್ದ ಸಾಧಾ ರಣ ಗಾತ್ರದ ಜಲ್ಲಿಕಲ್ಲಿನಿಂದಾಗಿ ಸ್ಥಳೀಯರು ನೆಮ್ಮದಿ ಕೆಡಿಸಿಕೊಂಡಿ ದ್ದರೆ, ಇನ್ನೂ ಕೆಲ `ಪೀಡೆ’ಗಳು ಮನಸ್ಸಲ್ಲಿಯೇ ಮಂಡಿಗೆ ಮೆಲ್ಲುವಂತೆ ಮಾಡಿದ್ದವು. ಈ ನಡುವೆ ಮಾಧ್ಯಮ ಗಳಲ್ಲಿ ಈ ಬಗ್ಗೆ ಸುದ್ದಿ ಬಂದ ನಂತರ ನಿನ್ನೆ ಯಾವಾಗಲೂ ಕಲ್ಲುಬೀಳುವ ಸಮಯದಲ್ಲಿ ಯಾವುದೇ ಜಲ್ಲಿಕಲ್ಲು ತೂರಿ ಬರಲಿಲ್ಲ. ನಿರ್ದಿಷ್ಟ ಸಮಯದ ಅಂತರದಲ್ಲಿ ಕೆಲ ಮನೆಗಳ ಮೇಲೆ ಬೀಳುವ ಕಲ್ಲುಗಳ ಹಿಂದೆ ಸಾಕಷ್ಟು ಅಂತೆ-ಕಂತೆಗಳ ಕಥೆಗಳೂ ಹುಟ್ಟಿಕೊಂಡಿತ್ತು. ಕೆಲವರು ಈ ಜಲ್ಲಿಕಲ್ಲಿನ ವಾರಸುದಾರರನ್ನು ಪತ್ತೆಹಚ್ಚಲು ಪ್ರಯತ್ನ ಪಟ್ಟರೂ ಯಾರೆಂದು ಸಿಗದೆ ತಲೆಬಿಸಿ ಮಾಡಿಕೊಂಡಿದ್ದರು. ಯಾರೂ ವಾರೀಸುದಾರರು ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಪಂಜುರ್ಲಿ ದೈವದ ಮೇಲೆಯೇ ದೂರು ಹಾಕಲಾಗಿತ್ತು. ಕಲ್ಲು ಬೀಳುವುದನ್ನು ಮಾಧ್ಯಮದವರು ಕೂಡಾ ಖುದ್ದಾಗಿ ನೋಡಿದ್ದರು. ನಿನ್ನೆಯೂ ಮಾಧ್ಯಮದವರು ಅಲ್ಲಿಗೆ ತೆರಳಿದಾಗ ಯಾವುದೇ ಕಲ್ಲುಗಳು ಬೀಳಲಿಲ್ಲ. ತುಂಬಾ ಹೊತ್ತು ಕಾದರೂ ಜಲ್ಲಿಕಲ್ಲು ವಾರೀಸುದಾರರು ಕಲ್ಲು ತೂರಾಟ ನಡೆಸಲು ಹಿಂದೇಟು ಹಾಕಿದರು. ಅಲ್ಲಿಗೆ ಈ ಕಲ್ಲು ತೂರಾಟದ ಹಿಂದೆ ಸ್ಥಳೀಯ ಕಿಡಿಗೇಡಿಗಳೇ ಇರುವುದು ಖಚಿತವಾಗಿದೆ.
ಜಲ್ಲಿಕಲ್ಲು ತೂರಾಟ ಆಗುವುದನ್ನು ನೋಡಲು ಮಾಧ್ಯಮದವರು ಮಾತ್ರವಲ್ಲದೆ ಸ್ಥಳೀಯರೂ ಸೇರಿದ್ದರು. ಆದರೆ ಯಾವುದೇ ಕಲ್ಲುಗಳು ಬೀಳಲಿಲ್ಲ. ಈ ನಡುವೆ ಇಬ್ಬರು ಯುವಕರು ಮಾಧ್ಯಮದವರ ವಾಹನಗಳನ್ನು ಹಿಂಬಾಲಿಸಿದ್ದು ಕೂಡಾ ಕಂಡು ಬಂತು. ಸ್ಥಳೀಯರೇ ಕೆಲವರು ತಮಾಷೆಗಾಗಿಯೋ ಅಥವಾ ಭೀತಿ ಹುಟ್ಟಿಸಲೋ ಎಂಬಂತೆ ಮಾಡಿದ ತಂತ್ರಗಾರಿಕೆಯಿದು ಎಂದು ಹೇಳಲಾಗುತ್ತಿದೆ.