ಬೆಂಗಳೂರು:ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಯವಾಗಿ ಧರಿಸಬೇಕೆಂಬ ನಿಯಮ ಇಂದಿನಿಂದ ಜಾರಿಗೆ ಬಂದಿದೆ. ಆದರೆ, ನಿಯಮ ಉಲ್ಲಂಘಿಸಿದ ಸವಾರರ ಮೇಲೆ “ದಂಡ ಪ್ರಯೋಗ ‘ ಮಾತ್ರ ತಿಂಗಳಾಂತ್ಯದಿಂದ ಆರಂಭವಾಗುವ ಸಾಧ್ಯತೆಯಿದೆ.
ಬೈಕ್ ಸವಾರರ ಜತೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ಇಲ್ಲವಾದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರಂಭದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ, ಅವರಿಗೆ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿ ನಿಯಮ ಕಡ್ಡಾಯದ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೆಲ್ಮೆಟ್ ಕಡ್ಡಾಯಗೊಳಿಸುವ ಸಂಬಂಧ ಹಿಂದೆಯೇ ಆಕ್ಷೇಪಣೆಗಳನ್ನು ಆಹ್ವಾನಿಸಿ ಬಳಿಕ ಅಧಿಸೂಚನೆ ಹೊರಡಿಸಲಾಗಿತ್ತು. ಅಂತಿಮ ಅಧಿಸೂಚನೆ ಹೊರಡಿಸಿದ ನಂತರವೂ ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿತ್ತು.
ಮಾರುಕಟ್ಟೆಯಲ್ಲಿ ಈ ಹೆಲ್ಮೆಟ್ಗಳ ಕೊರತೆ ಇರುವುದರಿಂದ ಪೊಲೀಸರು ಇನ್ನಷ್ಟು ಸಮಯವಾಕಾಶ ನೀಡುವ ಸಾಧ್ಯತೆಗಳಿವೆ.
ಏಕಾಏಕಿ ವಾಹನ ಸವಾರರನ್ನು ತಡೆದು, ದಂಡ ಹಾಕುವುದು ಸರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಆರಂಭದಲ್ಲಿ ನಿಯಮ ಅನುಷ್ಠಾನದಲ್ಲಿ ಸವಾರರಿಗೆ ತುಸು ವಿನಾಯ್ತಿ ನೀಡಲಾಗುತ್ತಿದೆ ಹೆಲ್ಮೆಟ್ ಧರಿಸಿದರೆ ಸಿಕ್ಕಿ ಬಿದ್ದರೆ ಮೊದಲ ಬಾರಿಗೆ ರು.100, ಎರಡನೇ ಬಾರಿಗೆ ರು.200 ಹಾಗೂ ಮೂರನೇ ಬಾರಿಗೆ ರು.300 ಮತ್ತು ಚಾಲನಾ ಪರವಾನಗಿಯನ್ನು ರದ್ದುಪಡಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಎಚ್ಚರಿಕೆ ನೀಡಿದೆ. ಹಿಂಬದಿ ಸವಾರ ಹೆಲ್ಮೆಟ್ ಹಾಕದೇ ಹೋದರೂ, ವಾಹನ ಸವಾರನಿಗೇ ದಂಡ ಬೀಳಲಿದೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿದೆ.
ಹೆಲ್ಮೆಟ್ ಖರೀದಿಗಾಗಿ ತಿಂಗಳ ಅಂತ್ಯದವರೆಗೆ ಸಮಯ ನೀಡಲಾಗುತ್ತದೆ. ಫೆಬ್ರವರಿ ಮೊದಲ ವಾರದಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಆಲೋಚನೆಯೂ ಇದೆ ಎಂದು ಮೂಲಗಳು ತಿಳಿಸಿವೆ.