ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುನ್ನೂರು: ಕೊಣಾಜೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಘನತ್ಯಾಜ್ಯ ವಿಲೇವಾರಿ ಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು ಘಟಕದಿಂದಾಗುವ ಪ್ರಯೋಜನದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕೆಲಸ ಗ್ರಾಮ ಪಂಚಾಯಿತಿಯಿಂದ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ ಹೇಳಿದರು.
ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಂಡಾರ್ ಬೈಲ್‍ನಲ್ಲಿ ಜಿಲ್ಲಾ ಪಂಚಾಯಿತಿಯ 20 ಲಕ್ಷ ಹಾಗೂ ಸುವರ್ಣ ಗ್ರಾಮ ಯೋಜನೆಯ 10 ಲಕ್ಷ ಅನುದಾನದಿಂದ ನಿರ್ಮಿಸಲಾದ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ ಸಂಯೋಜಕಿ ಮಂಜುಳಾ ಮಾತನಾಡಿ, ಘಟಕ ನಿರ್ಮಾಣಗೊಂಡಿದ್ದರೂ ಅದರ ನಿರ್ವಹಣೆ ಬಗ್ಗೆ ವ್ಯಾಪಾರಸ್ಥರು, ವಾಣಿಜ್ಯ ಸಂಕೀರ್ಣ ಮಾಲೀಕರು, ಗ್ರಾಮಸ್ಥರನ್ನೊಳಗೊಂಡ ಸಭೆಯನ್ನು ಗ್ರಾಮ ಪಂಚಾಯಿತಿಯಲ್ಲಿ ನಡೆಸಿ ಜಂಟಿ ಸಮಿತಿ ರಚಿಸಿ ತೆರಿಗೆ ಬಗ್ಗೆ ತೀರ್ಮಾನಿಸಬೇಕು. ಕೆಲವೊಮ್ಮೆ ತೆರಿಗೆ ಕಡಿತಕ್ಕೆ ಪ್ರಭಾವಿಗಳು ಒತ್ತಡ ಹೇರಿದರೂ ಜಗ್ಗದೆ ಸಮಿತಿಯ ತೀರ್ಮಾನಕ್ಕೆ ಬದ್ಧವಿದ್ದು ಅನಿವಾರ್ಯವಾದರೆ ಸಂಬಂಧಪಟ್ಟ ಅಂಗಡಿ, ಹೊಟೇಲುಗಳ ಪರವಾನಿಗೆ ರದ್ದುಪಡಿಸಲು ಹಿಂಜರಿಯಬಾರದು ಎಂದರು.
ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುದೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್ ವಂದಿಸಿದರು. ಕಾರ್ಯದರ್ಶಿ ಲುಕ್ಮಾನ್ ದಾಸ್ ಕಾರ್ಯಕ್ರಮ ನಿರೂಪಿಸಿದರು.
`ಮಂಗಳೂರು ವಿವಿ ಒಂದು ಎಕರೆ ಜಮೀನು ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ನೀಡಿದ್ದು ಐದು ಗ್ರಾಮಗಳ ಅನುದಾನ ಬಳಸಿ ಘಟಕ ನಿರ್ಮಾಣ ಯೋಜನೆಯಿದೆ, ಅಲ್ಲದೆ ಮೂರು ಕೋಟಿ ವೆಚ್ಚದಲ್ಲಿ ದ್ರವ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು ಎರಡು ವರ್ಷದಲ್ಲಿ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ’
ಮಂಜುಳಾ, ಜಿ.ಪಂ. ಸ್ವಚ್ಛ ಭಾರತ್ ಮಿಷನ್ ಸಂಯೋಜಕಿ