ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಜನಾಡಿ: ಹೆಚ್ಚಿನ ಗ್ರಾಮ ಪಂಚಾಯಿತಿಗಳು ಕೇವಲ ನೀರು ಪೂರೈಕೆ, ರಸ್ತೆ ಅಭಿವೃದ್ಧಿ, ಚರಂಡಿ, ದಾರಿದೀಪದ ಬಗ್ಗೆ ಮಾತ್ರವೇ ಗಮನಹರಿಸುತ್ತಿದ್ದು ಇದೇ ವೇಳೆ ಗ್ರಾಮ ಪಂಚಾಯಿತಿಗೆ ಆದಾಯ ತರುವ ಕೆಲಸಗಳ ಬಗ್ಗೆಯೂ ಯೋಜನೆ ರೂಪಿಸಬೇಕು ಎಂದು ಆರೋಗ್ಯ ಸಚಿಯ ಯು.ಟಿ.ಖಾದರ್ ಹೇಳಿದರು.
ರಾಜ್ಯ ಸರ್ಕಾರ ಗ್ರಾಮಾಭಿವೃದ್ಧಿ ಯೋಜನೆಗೆ ಹೆಚ್ಚಿನ ಆಧ್ಯತೆ ನೀಡಿದ್ದು 1.5 ಕೋಟಿ ರೂಪಾಯಿ ನೀಡುತ್ತಿದೆ. ಇದು ಮಂಜನಾಡಿಗೂ ದೊರಕಲಿದ್ದು ಒಳರಸ್ತೆ ಅಭಿವೃದ್ಧಿ ಸಹಿತ ವಿವಿಧ ಕಾಮಗಾರಿಗಳು ಶೀಘ್ರ ಆರಂಭಗೊಳ್ಳಲಿದೆ. ಇತರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಮತ್ತು ಸದಸ್ಯರ ಮಧ್ಯೆ ವೈಮನಸ್ಸು ಇದ್ದು ಮಂಜನಾಡಿಯಲ್ಲಿ ಅಂತಹ ಸಮಸ್ಯೆ ಇಲ್ಲದ ಕಾರಣ ಗ್ರಾಮ ಅಭಿವೃದ್ಧಿ ಸುಲಲಿತವಾಗಿದೆ. ನಿವೇಶನ, ಹಕ್ಕುಪತ್ರ ವಿತರಣೆ ಪ್ರಗತಿಯಲ್ಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ತಾಲೂಕು ಪಂಚಾಯಿತಿ ಸದಸ್ಯರಾದ ಮಹಮ್ಮದ್ ಮುಸ್ತಫಾ ಹರೇಕಳ, ಮಹಮ್ಮದ್ ಮೋನು ಮಲಾರ್, ನೆಕ್ಕರೆ ಬಾವ, ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ, ಇಸ್ಮಾಯಿಲ್ ದೊಡ್ಡಮನೆ, ಮಾಜಿ ಅಧ್ಯಕ್ಷೆ ಜೆಸಿಂತಾ ಪ್ರಮೀಳಾ ಡಿಸೋಜ, ಸ್ಥಳೀಯ ವೈದ್ಯ ರಾಮಾನುಜಂ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರ ಭಂಡಾರಿ ಸ್ವಾಗತಿಸಿದರು. ಎ.ಎ.ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.