Site icon Ullalavani

ಸ್ಕೂಟರ್ ಅಪಘಾತ : ಗಾಯಾಳು ಸಾವು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುಂಪಲ: ವಾರದ ಹಿಂದೆ ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕುಂಪಲ ಹನುಮಾನನಗರ ನಿವಾಸಿ ತಾನೇಶ್ (28) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ.

ಮಂಗಳಾದೇವಿಯಲ್ಲಿ ಟೈಲರ್ ಅಂಗಡಿಯನ್ನು ಹೊಂದಿರುವ ತಾನೇಶ್ ಅವರು ಡಿ.18ರ ಸಂಜೆ ಕೆಲಸ ಮುಗಿಸಿ ಕುಂಪಲದ ಮನೆ ಕಡೆಗೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿತ್ತು. ರಾ.ಹೆ.66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಸಂದರ್ಭ ತಾನೇಶ್ ಅವರು ನಿಯಂತ್ರಣ ಕಳೆದು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸ್ವಲ್ಪ ಗಾಯಗೊಂಡ ಮಹಿಳೆಯನ್ನು ತಾನೇಶ್ ಅವರೇ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತನ್ನ ಸಹೋದರರಿಗೆ ಅಪಘಾತವಾದ ವಿಚಾರವನ್ನು ತಿಳಿಸಿದ್ದರು. ಆಸ್ಪತ್ರೆಗೆ ಬಂದ ಸಹೋದರರು ತಾನೇಶ್ ಅವರ ತಲೆಗೂ ಗಾಯ ಆಗಿರುವುದನ್ನು ಗಮನಿಸಿ ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವಿಪರೀತ ತಲೆಯೊಳಗೆ ಆಗಿರುವ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version