Site icon Ullalavani

ಮಕ್ಕಳ ಕಣ್ಣು ಪ್ರಕಾಶಿಸಿದರೆ ದೇಶ ಪ್ರಕಾಶಿಸಿದಂತೆ: ಯು.ಟಿ.ಖಾದರ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಪಾನೀರ್: ಮಕ್ಕಳ ಕಣ್ಣು ಪ್ರಕಾಶಿಸಿದರೆ ದೇಶ ಪ್ರಕಾಶಿಸಿದಂತೆ, ಈ ನಿಟ್ಟಿನಲ್ಲಿ ಹೆತ್ತವರು, ಪೋಷಕರು ಮಕ್ಕಳ ಕಣ್ಣು ಪ್ರಕಾಶಿಸುವಂತೆ ಮಾಡಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಪಾನೀರ್ ಮರ್ಸಿದೆ ಆಶ್ರಮ ಹಾಗೂ ಮಂಗಳೂರಿನ ಮಾ ಕ್ರಿಯೇಶನ್ ಜಂಟಿ ಆಶ್ರಯದಲ್ಲಿ ಶುಕ್ರವಾರ ಪಾನೀರ್ ಆಶ್ರಮದಲ್ಲಿ ನಡೆದ ಕ್ರಿಸ್‍ಮಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನೊಬ್ಬನ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎನ್ನುವುದು ಏಸು ಕ್ರಿಸ್ತರ ಸಂದೇಶವಾಗಿದೆ. ಅದನ್ನು ಪಾಲಿಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ. ಮನುಷ್ಯ ಯಾರಿಗೂ ಉಪಕಾರ ಮಾಡದೆ ತಾನೊಬ್ಬನೇ ಬದುಕಬೇಕೆನ್ನುವ ಹಂಬಲ ಇದ್ದರೆ ಯಾವುದೇ ಕಷ್ಟ ಪಡಬೇಕಿಲ್ಲ. ಆದರೆ ಇಂತಹ ಭಾವನೆಯಿಂದ ಹೊರಬಂದು ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮರ್ಸಿದೆ ಆಶ್ರಮದ ಮುಖ್ಯಸ್ಥೆ ಸಹೋದರಿ ಲೂಸಿಯಾನ ಅವರನ್ನು ಸನ್ಮಾನಿಸಲಾಯಿತು.

ಪಾನೀರ್ ಚರ್ಚ್ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್, ಉದ್ಯಮಿ ಜೋಸೆಫ್ ಮಥಾಯಿಸ್, ಅರ್ಸುಲಿನಾ ಫ್ರಾನ್ಸಿಸ್ ಸಂಸ್ಥೆಯ ಸಲಹೆಗಾರರಾದ ಲಿಲ್ಲಿ ಫೆರ್ನಾಡೀಸ್, ರೀಟಾವಾಸ್, ಉದ್ಯಮಿ ಜೆಸ್ಸಿ ಪಿಂಟೋ, ಪಾನೀರ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಮಾ ಕ್ರಿಯೇಶನ್ ಸಂಚಾಲಕ ಅಲನ್ ಪಿರೇರ, ಸುನಿಲ್ ಪಿರೇರ ಇಸ್ರೇಲ್, ಅರ್ತೂರು ಪಿರೇರ ಒಂಝೂರು ಮೊದಲಾದವರು ಉಪಸ್ಥಿತರಿದ್ದರು.
ರೋನಿ ಕ್ರಾಸ್ತ ಕಾರ್ಯಕ್ರಮ ನಿರೂಪಿಸಿದರು. ಆಶ್ರಮದ ವಿದ್ಯಾರ್ಥಿಗಳಾದ ಆನಂದ್ ಮತ್ತು ಸುಶ್ಮಾ ವಂದಿಸಿದರು.

Exit mobile version