Site icon Ullalavani

ಉಳ್ಳಾಲ ಸಂಭ್ರಮ-ಸಡಗರದ ಈದ್ ಮಿಲಾದ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ , ಸಡಗರದಿಂದ ಉಳ್ಳಾಲದ ಸೈಯ್ಯದ್ ಮದನಿ ದರ್ಗಾದಲ್ಲಿ ಆಚರಿಸಲಾಯಿತು. 10,000 ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾ ಭಕ್ತಿ ಮೆರೆದರು.

ಉಳ್ಳಾಲ ದರ್ಗಾ ಸೇರಿದ 33 ಮಸೀದಿಯಿಂದ ಮತ್ತು ನೆರೆಯ ಕೊಣಾಜೆ, ಮುಡಿಪು, ಬೋಳಿಯಾರು, ಕುತ್ತಾರು, ಎಲಿಯಾರುಪದವು, ಮದನಿನಗರ , ಗ್ರಾಮಚಾವಡಿ, ಪಾವೂರು, ಇನೋಳಿ ಭಾಗದದವರು ಮೆರವಣಿಗೆಯಲ್ಲಿ ಪಾಲ್ಗೊಂಡು ದರ್ಗಾ ಸೇರಿದರು.
ಕಾರ್ಯಕ್ರಮವನ್ನು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಯುು.ಎಸ್ ಹಂಝರವರು ಉಳ್ಳಾಲ ಜುಮ್ಮಾ ಮಸೀದಿಯ ವಠಾರದಲ್ಲಿ ದ್ವಜಾರೋಹಣಗೈದು ಉದ್ಘಾಟಿಸಿದರು. ಖತೀಬರಾದ ಅಬ್ದುಲ್ ರವೂಫ್ ಮುಸ್ಲಿಯಾರ್ ದರ್ಗಾ ಝಿಯಾರತ್‍ಗೈದು ದುಆಗೈದರು. ಮಿಲಾದ್ ಪ್ರಯುಕ್ತ ಬೃಹತ್ ಸ್ವಲಾತ್ ಮೆರವಣಿಗೆ ಜರುಗಿತು.

 

ಕೋಟೆಪುರ ಜುಮಾ ಮಸೀದಿಯಿಂದ ಹೊರಟು ಕೋಡಿ, ಉಳ್ಳಾಲ ಪೇಟೆಯÁಗಿ ಮುಕ್ಕಚೇರಿ ಆಜಾದ್ ನಗರ, ಮೇಲಂಗಡಿ ಮಾರ್ಗವಾಗಿ ದರ್ಗಾ ವಠಾರದಲ್ಲಿ ಮೆರವಣಿಗೆ ಕೊನೆಗೊಂಡಿತು.

ಮೆರವಣಿಗೆಯಲ್ಲಿ ಪಾಲ್ಗೊಂಡ ಆರೋಗ್ಯ ಸಚಿವ ಯು.ಟಿ ಖಾದರ್ ಮಾತನಾಡಿ ಈದ್ ಮಿಲಾದ್ ಪ್ರೀತಿ, ಏಕತೆ, ಸಹೋದರತೆ, ತಾಳ್ಮೆ ಸಂಕೇತ ಹಬ್ಬವಾಗಿದೆ. ಪ್ರವಾದಿಯವರ ಆದರ್ಶದ ಒಂದು ಅಂಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸಬೇಕು. ಈ ಮೂಲಕ ಸಮಾಜದ ಮತ್ತು ದೇಶದ ಸಂಪತ್ತು ಎಲ್ಲರೂ ಆಗಬೇಕಿದೆ. ಇದರಿಂದ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಉಳ್ಳಾಲ ದರ್ಗಾ ಸಮಿತಿಗೆ ಸಂಬಂಧಿಸಿ ಹಿಂದೆ ಭಿನ್ನಾಭಿಪ್ರಾಯಗಳಿದ್ದು, ಅದು ಈ ಬಾರಿ ಅದು ಶಮನಗೊಂಡಿದೆ. ಎಲ್ಲರ ಸಮ್ಮುಖದಲ್ಲಿ ಉಳ್ಳಾಲದಲ್ಲಿ ವಿಜೃಂಭಣೆಯಿಂದ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಹಬ್ಬ ಯಶಸ್ವಿಯಾಗಿ ಆಚರಿಸಲಾಗಿದೆ ಎಂದರು.

ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಅಲ್-ಹಾಜಿ ಯು.ಎಸ್ ಹಂಝ ಮಾತನಾಡಿ 1490ನೇ ಯ ಜನ್ಮದಿನ ಮಿಲಾದುಲ್ ಶರೀಫ್ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಣೆಯಾಗಿದೆ. ದರ್ಗಾದಲ್ಲಿ ಝಿಯಾರತ್ ನೆರವೇರಿಸಿ ಕೋಟೆಪುರ ಜುಮಾ ಮಸೀದಿಯಲ್ಲಿ ಸೇರಿಕೊಂಡು ಆಝಾದನಗರ, ಮುಕ್ಕಚ್ಚೇರಿ ಮಾರ್ಗವಾಗಿ ದರ್ಗಾ ಸೇರಿದ್ದೇವೆ. 33 ಮದರಸದ ವಿದ್ಯಾರ್ಥಿಗಳು, ಉಸ್ತಾದರು, ಖತೀಬರು, ಜಮಾಅತಿನ ಸದಸ್ಯರು, ಎಲ್ಲರೂ ಒಟ್ಟಾಗಿ ಸೇರಿಕೊಂಡು ಭಾಗವಹಿಸುವ ಮೂಲಕ ರ್ಯಾಲಿ ಯಶಸ್ವಿಯಾಗಿದೆ. 3 ವರ್ಷಗಳಿಂದ ಎರಡು ಮೊಹಲ್ಲಾದವರು ಬೇರ್ಪಟ್ಟು ಹಬ್ಬವನ್ನು ಆಚರಿಸುತ್ತಿದ್ದೆವು, ಈ ವರ್ಷ ಮೇಲಂಗಡಿ, ಕೋಟೆಪುರ ಎಲ್ಲರನ್ನು ಉಳ್ಳಾಲದ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಞಳ್ ಇವರ ನೇತೃತ್ವದಲ್ಲಿ ಭಿನ್ನಾಭಿಪ್ರಾಯಗಳಿದ್ದುದ್ದನ್ನು ಸರಿಪಡಿಸಿ, ಎಲ್ಲರೂ ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಿದ್ದೇವೆ ಎಂದರು.

ಈ ಸಂದರ್ಭ ದರ್ಗಾ ಸಮಿತಿ ಉಪಾಧ್ಯಕ್ಶರಾದ ಅಶ್ರಫ್ ಅಹ್ಮದ್ ರೈಟ್ವೇ, ಮೇಲಂಗಡಿಯ ಮೊಹಿಯುದ್ಧೀನ್ ಜುಮಾ ಮಸೀದಿ ಹೊಸಪಳ್ಳಿ ಅಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಸೈಯ್ಯಿದ್ ಮದನಿ ಅರೆಬಿಕ್ ಟ್ರಸ್ಟಿನ ಮಾಜಿ ಉಪಾಧ್ಯಕ್ಷ ಅಹಮ್ಮದ್ ಬಾವಾ ಕೊಟ್ಟಾರ, ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್, ಜತೆ ಕಾರ್ಯದರ್ಶಿ ಮೊಹಮ್ಮದ್ ಅಶ್ರಫ್, ಫಾರೂಕ್ ಮಾರ್ಗತಲೆ, ಕೋಶಾಧಿಕಾರಿ ಮೊಹಮ್ಮದ್, ಆಡಿಟರ್ ಜೆ. ಅಬ್ದುಲ್ ಹಮೀದ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಸಯ್ಯಿದ್ ಝಿಯಾದ್ ತಂಙಳ್, ಕೋಶಾಧಿಕಾರಿ ಯು.ಟಿ ತಂಝೀಲ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಬಿ.ಜಿ ಹನೀಫ್ , ಕೋಶಾಧಿಕಾರಿ ನಾಝಿಮ್, ಜತೆ ಕಾರ್ಯದರ್ಶಿ ಫಾರೂಕ್ ಕೋಡಿ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷರಾದ ಬಾವಾಕ, ಮುಫತ್ತಿಶ್ ಸುಲೈಮಾನ್ ಸಖಾಫಿ, ದಅವಾ ಕಾಲೇಜು ಪ್ರಾಂಶುಪಾಲರಾದ ಕಲಾಂ ಸಖಾಫಿ, ಹಿಫುಲ್ ಕುರಾನ್ ಕಾಲೇಜು ಪ್ರಾಂಶುಪಾಲರಾದ ಅಬ್ದುಲ್ ರಹ್ಮಾನ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ಸಯ್ಯಿದ್ ಮದನಿ ದರ್ಗಾ ಸಮಿತಿ, ಅರಬಿಕ್ ಟ್ರಸ್ಟ್ , ಚಾರಿಟೇಬಲ್ ಟ್ರಸ್ಟ್ ಸದಸ್ಯರು, 32 ಮದ್ರಸ ವಿದ್ಯಾರ್ಥಿಗಳು, ಮದ್ರಸದ ಅಧ್ಯಾಪಕರು, 32 ಮೊಹಲ್ಲಾ ನಾಗರಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version