Site icon Ullalavani

ತುರ್ತು ಸಂದರ್ಭದಲ್ಲಿ ರಕ್ತ ಗುಂಪಿನ ಅರಿವು ಅಗತ್ಯ: ಡಾ.ಮುರಳೀ ಮೋಹನ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ : ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ರಕ್ತದ ಗುಂಪಿನ ಬಗ್ಗೆ ಮಾಹಿತಿಯಿದ್ದರೆ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಮುರಳೀ ಮೋಹನ್ ಚೂಂತಾರು ಹೇಳಿದರು.

ನಿಟ್ಟೆ ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕ ಹಾಗೂ ಮಂಜೇಶ್ವರದ ಪ್ರಿಯದರ್ಶಿನಿ ರಕ್ತ ಪ್ರಯೋಗಾಲಯದ ಜಂಟಿ ಆಶ್ರಯದಲ್ಲಿ ಬುಧವಾರ ಇನೋಳಿ ದ.ಕ.ಜಿ.ಪಂ. ಪ್ರಾಥಮಿಕ ಶಾಲೆಯಲ್ಲಿ ನಡೆದ ರಕ್ತ ವರ್ಗೀಕರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಅದೆಷ್ಟೋ ಮಂದಿ ತುರ್ತು ಸಂದರ್ಭದಲ್ಲಿ ರಕ್ತದ ಅನಿವಾರ್ಯತೆಯಿದ್ದು, ರಕ್ತದಾನಿಗಳಿದ್ದರೂ ಗುಂಪಿನ ಬಗ್ಗೆ ಅರಿವಿಲ್ಲದ ಕಾರಣ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಕ್ತದ ಗುಂಪಿನ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸರ್ಕಾರವೂ ಪ್ರತೀ ಶಾಲೆಗಳಲ್ಲಿ ಈ ಪ್ರಕ್ರಿಯೆ ನಡೆಸುವಂತೆ ಸುತ್ತೋಲೆ ನೀಡಿದೆ ಎಂದು ತಿಳಿಸಿದರು.

ಪ್ರಿಯದರ್ಶಿನಿ ರಕ್ತ ಪ್ರಯೋಗಾಲಯದ ಮುಖ್ಯಸ್ಥ ಅಬ್ದುಲ್ ಹಮೀದ್ ಮಾತನಾಡಿ, ಸೊಳ್ಳೆ ಕಚ್ಚುವಾಗ ಆಗುವ ನೋವಿಗಿಂತಲೂ ಕಡಿಮೆ ನೋವು ಪರೀಕ್ಷೆ ನಿಟ್ಟಿನಲ್ಲಿ ರಕ್ತ ತೆಗೆಯುವ ಸಂದರ್ಭ ಆಗುತ್ತದೆ. ಆದರೆ ನೋವಿನ ಭಿತಿಯಿಂದ ಅದೆಷ್ಟೋ ಮಂದಿ ರಕ್ತದ ಗುಂಪಿನ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದಿರುವುದು ಖೇದಕರ ಎಂದರು.

ಪ್ರಿಯದರ್ಶಿನಿ ರಕ್ತ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ ತನ್ವೀರ್, ರಶಿಕಾ, ರವೂಫ್, ರಮ್ಲತ್, ರಮ್ಶೀನ, ಶಾಲೆಯ ಶಿಕ್ಷಕರಾದ ನಿಜಪ್ಪ, ಶೋಭಾ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸುಶೀಲಾ ಬಾೈ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version