Site icon Ullalavani

ಸಹಿಷ್ಣುತೆಯಿಂದ ಕೂಡಿರುವ ಸಾಹಿತ್ಯ ಸಾರ್ವಕಾಲಿಕ: ಅಮೃತಾನಂದಮಯಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಮಕ್ಕಳಿಗೆ ಸಾಹಿತ್ಯದ ಬೆಳವಣಿಗೆ, ಪರಿಚಯ ಮತ್ತು ಸಾಹಿತಿಗಳ ಮೇಲೆ ಗೌರವ ಭಾವನೆ ಯನ್ನು ಮೂಡಿಸುವಲ್ಲಿ ಸಾಹಿತ್ಯ ಉತ್ಸವಗಳಿಂದ ಮಾತ್ರ ಸಾಧ್ಯ ಎಂದು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಅಮೃತಾನಂದಮಯಿ ನುಡಿದರು.

ಅವರು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಮಂಗಳವಾರ ನಡೆದ ನಾಡು ನುಡಿ ವೈಭವದ “ರತ್ನೋತ್ಸವ 2015” ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು.

ಸಹಿಷ್ಣುತೆಯಿಂದ ಕೂಡಿರುವ ಸಾಹಿತ್ಯ ಸಾರ್ವಕಾಲಿಕ. ಅಂತಹ ಸಂಸ್ಕøತಿ ಮತ್ತು ಪರಂಪರೆಯನ್ನು ಸಾಹಿತ್ಯದ ಮೂಲಕ ಅರಿತುಕೊಳ್ಳಬಹುದು. ಬದುಕನ್ನು ಪ್ರೇರೇಪಿಸಲು , ಪುರಾಣ ತಿಳಿಯಲು ಸಾಹಿತ್ಯ ಸಹಕಾರಿ. ಕವಿಗಳಲ್ಲಿ ಒಳ್ಳೆಯ ಹೃದಯಗಳಿದ್ದಲ್ಲಿ ಒಳ್ಳೆಯ ಸಾಹಿತ್ಯ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಕೃತಿ ಸಹಜ ಸಾಹಿತ್ಯ ಸಮಾಜದಲ್ಲಿ ಕ್ಷೇಮದ ವಾತಾವರಣ ಉಂಟು ಮಾಡುವುದು. ವಿಕೃತಿ ಸಾಹಿತಿಗಳಿಂದ ಸಮಾಜದಲ್ಲಿ ಗೊಂದಲದ ವಾತಾವರಣ ಉಂಟಾಗುವುದರಲ್ಲಿ ಸಂಶಯವಿಲ್ಲ ಎಂದರು

ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಛಾಂದಸ ಡಾ.ಎನ್ ನಾರಾಯಣ ಶೆಟ್ಟಿ ಶಿಮಂತೂರು ಸಮ್ಮೇಳನ ಉದ್ಘಾಟಿಸಿದರು.
ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‍ನ ಧರ್ಮಗುರು ರೆ.ಫಾ.ಜೆ.ಬಿ. ಸಲ್ದಾನ ಮಾಥನಾಡಿ ಸಮಾಜದಲ್ಲಿ ಮೌಲ್ಯಾಧಾರಿತ , ಸಂಸ್ಕøತಿಯ ಅರಿವು ಮೂಡಿಸಲು ಸಾಹಿತ್ಯಗಳಿಂದ ಸಾಧ್ಯ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ನಾಡಿನ ಸಿರಿವಂತಿಕೆ, ಸಾಂಪ್ರದಾಯಿಕ ಸಿರಿವಂತಿಕೆ ಮೂಲಕ ಮನುಜ ಕುಲಕ್ಕೆ ಏಕತೆಯನ್ನು ಸಾರಿದಾಗ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ.

ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಙÂ ಮಾತನಾಡಿ ಬೆರೆಯುವ ಮತ್ತು ಮರೆಯುವ ಗುಣಗಳಿದ್ದಲ್ಲಿ ಒಳ್ಳೆಯ ಮನುಷ್ಯನಾಗಲು ಸಾಧ್ಯ. ಜೀವನದಲ್ಲಿ ಭಾರಗಳನ್ನು ಹೊರದೆ ನೆಮ್ಮದಿಯಿಂದ ಬದುಕುವ ಮನಸ್ಸು ಎಲ್ಲರಲ್ಲಿ ಮೂಡಬೇಕಿದೆ. ಮಾನವೀಯತೆಯನ್ನು ಬೆಳೆಸಲು ಸಾಹಿತ್ಯದ ಕಾರ್ಯಕ್ರಮಗಳಿಗೆ ಶಕ್ತಿಯಿದೆ ಎಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ನಿವೃತ್ತ ಮುಖ್ಯಸ್ಥ ಡಾ. ತಾಳ್ತಜೆ ವಸಂತ್ ಕುಮಾರ್ ಮಾತನಾಡಿ ಅಂತರಂಗದಲ್ಲಿ ಪರಿಶುದ್ಧತೆ ಇಲ್ಲದಿದ್ದಲ್ಲಿ ವರ್ತನೆಯಲ್ಲಿ ಪರಿಶುದ್ಧತೆ ಬರಲು ಸಾಧ್ಯವಿಲ್ಲ. ಪರಿಶುದ್ಧತೆಯನ್ನು ಕಾಪಾಡಲು ಎಲ್ಲಾ ಧರ್ಮಗಳ ಸಂದೇಶ ಇದೆ. ಇನ್ನೊಬ್ಬರ ವಿಚಾರ, ಧರ್ಮ ಸಹಿಸಿಕೊಂಡು ಬದುಕುವುದು ಕಸವರ(ಚಿನ್ನ). ಅದನ್ನು ರೂಪಿಸಲು ಸಾಹಿತ್ಯ ದ ಕಾರ್ಯಕ್ರಮಗಳನ್ನು ಮಾಡಿ ಎಲ್ಲರನ್ನು ಸಾಹಿತ್ಯದ ಕಡೆಗೆ ಸಮ್ಮುಖರಾಗುವಂತೆ ಮಾಡಬೇಕಿದೆ ಎಂದರು.

ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಫಾ, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರು, ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ ಆರ್. ಶೆಟ್ಟಿ ಉಪಸ್ಥಿತರಿದ್ದರು.

ಸಮ್ಮೇಳನದ ಸಂಚಾಲಕ, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಭಾಸ್ಕರ್ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೋನ್ಸೆ ಪುಷ್ಕಳ್ ಕುಮಾರ್ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯಿತಿ ಕಚೇರಿ ವಠಾರದಿಂದ ಪೂರ್ಣಕುಂಭ, ಚೆಂಡೆವಾದನ, ಗೊಂಬೆಕುಣಿತ, ವೀರಗಾಸೆ, ಬಣ್ಣದ ಕೊಡೆಗಳೊಂದಿಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ದಿಬ್ಬಣ ಭವ್ಯ ಮೆರವಣಿಗೆಯು ರತ್ನೋತ್ಸವ ವೇದಿಕೆಯತ್ತ ಸಾಗಿ ಬಂತು.

Exit mobile version