ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯಾಡಳಿತ ಜನಪ್ರತಿನಿ„ಗಳ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಸಮಾವೇಶ ಮುಡಿಪು ಆಡಿಟೋರಿಯಂನಲ್ಲಿ ಡಿ. 22ರಂದು ಮಧ್ಯಾಹ್ನ ಮೂರು ಗಂಟೆ ನಡೆಯಲಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಹೇಳಿದರು.
ಕುತ್ತಾರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರ ಗೆಲುವು ಖಂಡಿತ. ಪಕ್ಷದ ತತ್ವ ಹಾಗೂ ಸಿದ್ಧಾಂತದಂತೆ ನಡೆದಿರುವ ಪ್ರತಾಪ್‍ಚಂದ್ರ ಶೆಟ್ಟಿ ಅವರ ಪಕ್ಷ ನಿಷ್ಠೆ, ಜನರ ಜೊತೆಗಿನ ಒಡನಾಟ, ಕ್ಷೇತ್ರದ ಅಭಿವೃದ್ಧಿ ಎಲ್ಲವನ್ನೂ ಗಮನಿಸಿದಾಗ ಅವರ ಗೆಲುವು ನಿಶ್ಚಿತ ಎಂದು ನುಡಿದರು.
ವಿಧಾನ ಪರಿಷತ್ ಚುನಾವಣೆ ಕಾವು ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಇನ್ನೂ ಏರಿಲ್ಲ. ಆದರೆ ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಪ್ರಚಾರ ಕಾವು ಪಡೆದಿದೆ ಎಂಬುದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರಕಟಿಸಿದ ಕರಪತ್ರಗಳನ್ನು ನೋಡಿದಾಗ ಗಮನಕ್ಕೆ ಬರುತ್ತದೆ. ವಾಸ್ತವದಲ್ಲಿ ಕರಪತ್ರದಲ್ಲಿ ಮುದ್ರಿತವಾಗಿರುವಂತೆ ಕೆಲವೊಂದು ಕಾಮಗಾರಿ ಇನ್ನೂ ನಡೆಯದಿರುವುದು ಮತದಾರರಲ್ಲಿ ಗೊಂದಲ ಮೂಡಿಸಿದೆ. ಹಾಗಾಗಿ ನಡೆದ ಕಾಮಗಾರಿಗಳನ್ನು ಮಾತ್ರ ಜನರ ಮುಂದಿಡಲಿ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾರ್ಮಿಕ ಘಟಕ ಅಧ್ಯಕ್ಷ ಅಬ್ದುಲ್ ನಾಸಿರ್ ನಡುಪದವು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದೇವದಾಸ ಭಂಡಾರಿ ಕುರ್ನಾಡು, ಚುನಾವಣಾ ವೀಕ್ಷಕರಾದ ದೀಪಕ್ ಶೆಟ್ಟಿ ಕುಂದಾಪುರ ಹಾಗೂ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.