ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಇರಾ: ಶೈಕ್ಷಣಿಕ ಕ್ರಾಂತಿಯಿಂದ ಮಾತ್ರ ಆರ್ಥಿಕ ಸಬಲೀಕರಣ ಸಾಧ್ಯವಿದ್ದು, ಸಮುದಾಯ ಭವನ ನಿರ್ಮಿಸುವ ಮೂಲಕ ಮಲೆಯಾಳಿ ಬಿಲ್ಲವ ಸಂಘ ಮುಂದಿನ ದಿನಗಳಲ್ಲಿ ಇಲ್ಲಿ ಶಿಕ್ಷಣ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಆರ್ಥಿಕವಾದ ಸಬಲೀಕರಣಕ್ಕೆ ನಾಂದಿ ಹಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಮಲೆಯಾಳಿ ಬಿಲ್ಲವ ಸೇವಾ ಸಂಘ ಇರಾ ಕಲ್ಲಾಡಿಯಲ್ಲಿ ನಿರ್ಮಿಸಿದ ನೂತನ ಮಲೆಯಾಳಿ ಬಿಲ್ಲವ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತೀಯಾ ಅಮೃತ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬಿಡುಗಡೆಗೊಳಿಸಿ ಯಾವುದೇ ಸಮಾಜಕ್ಕೂ ಆರ್ಥಿಕ ಸೇರಿದಂತೆ ಯಾವುದೇ ರೀತಿಯಲ್ಲಿ ಕೀಳರಿಮೆ ಮನೋಭಾವನೆ ಇರಕೂಡದು. ಆದರ್ಶಯುತ ನಡೆನುಡಿಗಳ ಮೂಲಕ ಸರ್ವರ ಸಂಘಟನಾ ಬಲದಿಂದ ಯಾವುದೇ ಸಮುದಾಯ ಬಲಿಷ್ಠವಾಗಲು ಸಾಧ್ಯ ಎಂದರು.
ಉದಯವಾಣಿ ಮಂಗಳೂರು ಸುದ್ಧಿ ವಿಭಾಗದ ಮುಖ್ಯಸ್ಥ ಮನೋಹರ್ ಪ್ರಸಾದ್ ನಾಮಫಲಕ ಅನಾವರಣ ನಡೆಸಿ ಸಮುದಾಯ ಸಂಘಟನೆಗಳು ಬಲಿಷ್ಠವಾದಾಗ ನೆಮ್ಮದಿ ಮತ್ತು ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ಮಲೆಯಾಳಿ ಬಿಲ್ಲವ ಸಮಾಜ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಸಮುದಾಯ ಭವನ ಉದ್ಘಾಟಿಸಿದರು. ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಆಚಾರಪಟ್ಟವರು ದೀಪ ಬೆಳಗಿಸಿ ಸಭಾ ಭವನ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಗಳೂರಿನ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ಗಣೇಶ್ ರಾವ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ಮಾಧವ ಜಪ್ಪುಪಟ್ಟಣ, ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲ ಇದರ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಲತಾ ಸಿ. ಕರ್ಕೇರ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ, ಲಕ್ಷ್ಮೀ ಹೆಲ್ತ್‍ಕೇರ್ ಸೆಂಟರ್ ಪಿರಿಯಾ ಪಟ್ಟಣ ಮೈಸೂರಿನ ಡಾ| ಪ್ರಕಾಶ್ ಬಾಬು ಕೆ., ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಅಧ್ಯಕ್ಷ ರವಿ ಪೂಜಾರಿ, ಪ್ರಮುಖರಾದ ದಿನೇಶ್, ಸಾವಿತ್ರಿ ಚಂದ್ರಶೇಖರ್ ಪಾತ್ರಾಡಿ, ರಾಮಕೃಷ್ಣ ಸೂತ್ರಬೈಲು, ನಾಗೇಶ್ ಗುರಿಕಾರ, ಸತೀಶ್ ಗುರಿಕಾರ, ರಾಮ ಗುರಿಕಾರ, ಸಮಿತಿ ಅಧ್ಯಕ್ಷ ಎಚ್. ತನಿಯಪ್ಪ, ಕಾರ್ಯದರ್ಶಿ ಪಿ. ರಾಮಕೃಷ್ಣ, ಯುವ ವೇದಿಕೆ ಅಧ್ಯಕ್ಷ ದಾಮೋದರ ಸೂತ್ರಬೈಲು, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಪದ್ಮನಾಭ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಲೆಯಾಳಿ ಬಿಲ್ಲವ ಸಂಘದ ಸ್ಥಾಪಕ ಸದಸ್ಯರಿಗೆ ಗೌರವಾರ್ಪಣೆ ನಡೆಯಿತು. ಸಮುದಾಯ ಭವನದ ಉದ್ಘಾಟನೆಯ ಹಿನ್ನಲೆಯಲ್ಲಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಒಂಡು ಜೋಡಿ ಉಚಿತ ವಿವಾಹ ಸಮಾರಂಭ ನಡೆಯಿತು.
ಸಮಿತಿಯ ಗೌರವಾಧ್ಯಕ್ಷ ಕೆ. ಚಂದ್ರಹಾಸ ಕರ್ಕೇರ ಸ್ವಾಗತಿಸಿದರು. ಉದ್ಘಾಟನಾ ಸಮಿತಿ ಅಧ್ಯಕ್ಷ ವೈ.ಬಿ.ಸುಂದರ್ ಪ್ರಸ್ತಾವನೆಗೈದರು. ಸಾಂಸ್ಕøತಿಕ ಕಾರ್ಯದರ್ಶಿ ದಿನೇಶ್ ಇರಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಇರಾ ವಂದಿಸಿದರು.