ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಯಾವುದೇ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ಇದೆಯಾದರೂ ಅದನ್ನು ಮೊಟಕುಗೊಳಿಸಲಾಗಿದೆ, ಈ ನಿಟ್ಟಿನಲ್ಲಿ ಮತ್ತೆ ಪಂಚಾಯಿತಿಗೇ ಅಧಿಕಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಪಂಚಾಯಿತಿ ರಾಜ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಎರಡೂವರೆ ಸಾವಿರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗಿದ್ದು ಒಂದೂವರೆ ಸಾವಿರ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿಗೊಳಿಸಲಾಗಿದೆ. ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಹೆಚ್ಚಿಲಾಗಿದೆ. ಮೂರನೇ ಹಣಕಾಸು ಅಯೋಗದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಜಿಲ್ಲಾ ಪಂಚಾಯಿತಿಗಳಿಗೆ ವಿಶೇಷ ನಿಧಿಯಿಂದ ವರ್ಷಕ್ಕೆ ಒಂದು ಕೋಟಿ ಹಾಗೂ ವಿವೇಚನಾ ನಿಧಿಯಿಂದ ಎರಡು ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು ಎಂದು ಬುಧವಾರ ತೊಕ್ಕೊಟ್ಟಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ತಾನು ವಿಧಾನಪರಿಷತ್ ಸದಸ್ಯನಾದ ಬಳಿಕ ಗ್ರಾಮ ಪಂಚಾತಿಯಿಗಳ ಸಬಲೀಕರಣ ನಿಟ್ಟಿನಲ್ಲಿ ಧ್ವನಿ ಎತ್ತಿದ್ದು ಪಂಚಾಯಿತಿ ಸದಸ್ಯರಿಗೆ ಗೌರವ ಧನ ಸಿಗುವಂತೆ ಮಾಡಿದ್ದೇನೆ. ಗೌರವ ಧನ ಎರಡು ಸಾವಿರ ನೀಡಬೇಕು ಎನ್ನುವ ಪ್ರಸ್ತಾಪ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದ ಅವರು, ಈಗಾಗಲೇ ಮತದಾರರನ್ನು ಸಂಪರ್ಕಿಸುವ ಪ್ರಥಮ ಹಂತದ ಪ್ರಯತ್ನ ಮುಗಿಸಲಾಗಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಯಶವಂತ ಅಮೀನ್, ಜಿಲ್ಲಾ ವಕ್ತಾರ ಕೆ.ಜಯರಾಮ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ಪರಿಷತ್ ಸದಸ್ಯ ಸೀತಾರಾಮ ಬಂಗೇರ ಹಾಗೂ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ರಾಜ್ ಉಪಸ್ಥಿತರಿದ್ದರು.