Site icon Ullalavani

ವೃತ್ತಿಯನ್ನು ಪ್ರೀತಿಸಿದಾಗ ಬದುಕು ಅರಳುವುದು: ನಳಿನ್ ಕುಮಾರ್

ತೊಕ್ಕೊಟ್ಟು: ಹಕ್ಕು ಮತ್ತು ಚೈತನ್ಯದ ಜತೆಗೆ ಗೌರವ ಹಾಗೂ ನ್ಯಾಯ ಒದಗಿಸುವ ಕಾರ್ಯ ಟೈಲರ್ಸ್ ಸಂಘಟನೆಯಿಂದ ಆಗಿರುವುದು ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟುವಿನ ಕ್ಲಿಕ್ ಸಭಾಂಗಣದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್‍ನ ಉಳ್ಳಾಲ ಕ್ಷೇತ್ರ ಸಮಿತಿ ಇದರ 6 ನೇ ಬೃಹತ್ ಕ್ಷೇತ್ರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಎಲ್ಲಾ ಕ್ಷೇತ್ರದಲ್ಲಿ ಸಂಘಟನೆಗಳಿದ್ದರೂ, ರಾಜಕಾರಣಿಗಳು ಮಾತ್ರ ಅಸಂಘಟಿತರಿದ್ದಾರೆ. ವೃತ್ತಿಯನ್ನು ಪ್ರೀತಿಸಿದಾಗ ಬದುಕು ಅರಳುವುದು. ವೇಗದ ಸಮಾಜದಲ್ಲಿ ವೃತ್ತಿಗಳು ಪರಿವರ್ತನೆಯಾಗುತ್ತಲೇ ಇರುತ್ತದೆ.

ಇದು ಸಮಾಜದ ಪರಿವರ್ತನೆಗೂ ಪೂರಕ. ಆದರೆ ಸಂಘಟನೆಗಳಿರುವಲ್ಲಿ ಮಾತ್ರ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯ . ಈ ನಿಟ್ಟಿನಲ್ಲಿ ಸ್ವರ ಮತ್ತು ಶಕ್ತಿಯನ್ನು ಒಂದುಗೂಡಿಸಿ ಕಾರ್ಯ ನಿರ್ವಹಿಸುವ ಟೈಲರ್ಸ್ ಸಂಘಟನೆಗೆ ಸರಕಾರದಿಂದ ಎಲ್ಲಾ ರೀತಿಯೂ ಸಹಕಾರ ನೀಡಲು ಸಿದ್ಧ ಎಂದರು.

ಕಾರ್ಯಕ್ರಮವನ್ನು ಟೈಲರ್ಸ್ ಅಸೋಸಿಯೇಷನ್‍ನ ರಾಜ್ಯಾಧ್ಯಕ್ಷ ಬಿ.ವಸಂತ್ ಉದ್ಘಾಟಿಸಿದರು. ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷ ನಾರಾಯಣ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ಯೆನೆಪೋಯ ವಿ.ವಿ.ಯ ವೈದ್ಯಕೀಯ ಅಧಿಕಾರಿ ಡಾ.ಸುರೇಶ್, ರಾಜ್ಯ ಸಮಿತಿ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಜಿಲ್ಲಾಧ್ಯಕ್ಷರು ಉದಯ ಕುಮಾರ್, ಜೈಶಂಕರ್ ಹಾಗೂ ಜಯಲಾಕ್ಷ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಅಸೋಸಿಯೇಷನ್ನಿನ ಮುಖಂಡ ಕೆ.ಎಸ್.ಆನಂದ್ ಅವರು ತೊಕ್ಕೊಟ್ಟು ಬಸ್ ತಂಗುದಾಣದಿಂದ ಒಳಪೇಟೆಯ ಕ್ಲಿಕ್ ಮ್ಯಾರೇಜ್ ಹಾಲ್ ವರೆಗೆ ನಡೆದ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭ ಹಲವು ವರ್ಷಗಳಿಂದ ಟೈಲರಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಿರಿಯರಾದ ಕಿಶೋರ್ ಟೈಲರ್ ಸೋಮೇಶ್ವರ, ಕೃಷ್ಣಪ್ಪ ಟೈಲರ್ ಉಳ್ಳಾಲ, ಮಂಜುನಾಥ .ಡಿ.ಶೆಟ್ಟಿ ಮುಡಿಪು, ತನಿಯಪ್ಪ ಪೂಜಾರಿ ಪಜೀರು, ಜಯರಾಮ ಶೆಟ್ಟಿ ಕೊಣಾಜೆ, ನಿರ್ಮಲ.ಜೆ.ಶೆಟ್ಟಿ ಕಿನ್ಯಾ, ರಮಾನಾಥ ರೈ ಪೆರ್ಮನ್ನೂರು ಇವರನ್ನು ಸನ್ಮಾನಿಸಲಾಯಿತು.

ಸುಜಾತಾ ಶೆಟ್ಟಿ, ಜಯ ದೇಸೋಡಿ ಸನ್ಮಾನಿತರ ವಿವರ ನೀಡಿದರು.

ಸತೀಶ್ ಕುಂಪಲ ಸ್ವಾಗತಿಸಿದರು. ಆಶೀಕ್ ಮಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಮಾಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಾವತಿ ವಂದಿಸಿದರು.

Exit mobile version