ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ವಿಕಲಚೇತನರಿಗೆ ಹುಟ್ಟಿನಿಂದ 18 ರ ಹರೆಯದವರೆಗೆ ಉಚಿತ ಚಿಕಿತ್ಸೆ ಹಾಗೂ ಔಷಧ ನೀಡುವ ಯೋಜನೆ ಸರ್ಕಾರ ಹಮ್ಮಿಕೊಂಡಿದ್ದು, ಅಂಗವೈಕಲ್ಯ ತಡೆಗಟ್ಟುವುದೇ ಸರಕಾರದ ಮುಖ್ಯ ಉದ್ದೇಶ ಆಗಿರುವ ನಿಟ್ಟಿನಲ್ಲಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಪನ್ಮೂಲ ಶಿಕ್ಷಣಾಲಯ ಕೇಂದ್ರದ ಉಪನಿರ್ದೇಶಕ ಬೆಂಗಳೂರಿನ ಡಾ.ಪ್ರಭುದೇವ ಗೌಡ ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಗುರುವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲ ಚೇತನರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕ್ಷೇಮಾ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ 2011ರ ಗಣತಿ ಪ್ರಕಾರ ಭಾರತದಲ್ಲಿ 2.5 ಕೋಟಿ ವಿಕಲ ಚೇತನರಿದ್ದು ಸರ್ಕಾರ ವಿವಿಧ ಸವಲತ್ತುಗಳನ್ನು, ಕಾನೂನನ್ನು ಜಾರಿಗೆ ತಂದಿದೆ. ಆದರೆ ಬಡತನ, ಅನರಕ್ಷರತೆ, ಸಾಮಾಜಿಕ ಕುಂದು ಕೊರತೆಯಿಂದ ಇಂದಿಗೂ ಅದ್ಯಾವುದೂ ಸಮರ್ಪಕವಾಗಿ ಬಳಕೆಯಾಗದ ಕಾರಣ ವಿಕಲಚೇತನರಿಗೆ ನ್ಯಾಯ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲೂ ಹಲವು ಮಂದಿ ವಿಕಲಚೇತನರು ಸಾಧನೆಯ ಮೆಟ್ಟಿಲೇರಿದ್ದಾರೆ. ಸುದಾ ಚೇತನ ಅಫಘಾತದಲ್ಲಿ ಕಾಲು ಕಳೆದುಕೊಂಡರೂ ಭರತನಾಟ್ಯ ಮತ್ತು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದು ಇವರನ್ನು ಆದರ್ಶ ಪ್ರಾಯರನ್ನಾಗಿ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಎಸ್.ನಾಯಕ್, ಮಕ್ಕಳ ದಂತ ವಿಭಾಗದ ಮುಖ್ಯಸ್ಥೆ ಡಾ.ಅಮಿತಾ ಹೆಗ್ಡೆ. ಕೆ.ಎಸ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಕರುಣಾ ರಮೇಶ್, ಡಾ.ಕವಿತಾ, ಡಾ.ಅಮರಶ್ರೀ ಶೆಟ್ಟಿ, ವಿಕಲ ಚೇತನರ ಪ್ರತಿನಿಧಿ ಮಂಜನಾಡಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರಮ್ಸಿತಾ ಮೊದಲಾದವರು ಉಪಸ್ಥಿತರಿದ್ದರು.
ಸಂಪನ್ಮೂಲ ಶಿಕ್ಷಣಾಲಯ ನಿರ್ದೇಶಕ ಲಕ್ಷ್ಮಿನಾರಾಯಣ ಸ್ವಾಗತಿಸಿದರು. ಕ್ಷೇತ್ರ ಬಿಆರ್‍ಪಿ ತುಳಸೀ ವಂದಿಸಿದರು. ಮಂಗಳೂರು ದಕ್ಷಿಣ ಐಐಆರ್ಟಿ ಕಿಶೋರಿ ಕಾರ್ಯಕ್ರಮ ನಿರೂಪಿಸಿದರು.