ನವದೆಹಲಿ: ತಮಿಳುನಾಡು ಹಾಗೂ ರಾಜಧಾನಿ ಚೆನ್ನೈನಲ್ಲಿ ಸತತ ಮಳೆಯಿಂದ ಉಂಟಾದ ಜಲಪ್ರಳಯಕ್ಕೆ ರಾಜ್ಯವೇ ತತ್ತರಿಸಿಹೋಗಿದ್ದು, ಚೆನ್ನೈ ಬುಧವಾರ ಸಂಪೂರ್ಣ ಮುಳುಗಡೆಯಾಗಿದೆ.ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರ ರು.5 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಆಹಾರ, ಸಾರಿಗೆ, ಔಷಧ ಸೇರಿದಂತೆ ಯಾವುದೇ ರೀತಿಯ ನೆರವು ಬೇಕಾದರೂ ನೀಡಲು ರಾಜ್ಯ ಸಿದ್ಧವಿದೆ. ಈ ಸಂಬಂಧ ತಮಿಳುನಾಡು ಮುಖ್ಯ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಲು ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಚೆನ್ನೈ, ಕಾಂಚಿಪುರಂ, ತಿರುವಳ್ಳೂರು, ಕಡಲೂರು ಮತ್ತು ವಿಲ್ಲುಪುರಂ ತಿರುನಲ್ಲಿ ಕರಾವಳಿ ಪಡೆ, ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿಗ್ರಹ ಪಡೆಗಳನ್ನು ನಿಯೋಜಿಸಲಾಗಿದೆ.ಎತ್ತರದ ಪ್ರದೇಶದಲ್ಲಿ ಸಿಲುಕಿಹಾಕಿಕೊಂಡವರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದ್ದು, ನಿರಾಶ್ರಿತರಿಗಾಗಿ ಸರಕಾರ ಅನೇಕ ಕಡೆಗಳಲ್ಲಿ ಗಂಜಿ ಕೇಂದ್ರವನ್ನು ತೆರೆದಿದೆ.
ಜಲಪ್ರಳಯದಲ್ಲಿ ಮೊಸಳೆಗಳು ಓಡಾಡುತ್ತಿವೆ ಎಂಬುದು ಸುಳ್ಳು ಸುದ್ದಿ ಎಂದು ಕ್ರೊಕೋಡೈಲ್ ಬ್ಯಾಂಕ್ ಹೇಳಿದೆ. ದಯವಿಟ್ಟು ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದೆ.
ಸುನಾಮಿಗಿಂತಲೂ ಭೀಕರವಾದ ಜಲಪ್ರಳಯಕ್ಕೆ ಟಾಲಿವುಡ್ ನಟ ಜ್ಯೂ.ಎನ್ ಟಿಆರ್, ರಾಂ ಕಲ್ಯಾಣ್, ಸೂಪರ್ ಸ್ಟಾರ್ ರಜನಿಕಾಂತ್ ಆರ್ಥಿಕ ನೆರವು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸಂದೇಶಗಳು ರವಾನೆಯಾಗುತ್ತಿದೆ.
ಚೆನ್ನೈ ಮಳೆಯಲ್ಲಿ ಸಿಕ್ಕಿಕೊಂಡವರಿಗಾಗಿ ಅಮಿತಾಭ್ ಬಚ್ಚನ್ ಟ್ವಿಟ್ಟರ್‍ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾದವರಿಗೆ ಹೃದಯಪೂರ್ವಕ ಸಹಾಯ ಸೂಚಿಸಿದ್ದಾರೆ.