ನವದೆಹಲಿ: ಜೀವಾವಧಿ ಶಿಕ್ಷೆಗೆ ಗುರಿಯಾದವರಿಗೆ ಕ್ಷಮಾದಾನ ನೀಡುವ ಅಧಿಕಾರ ರಾಜ್ಯಸರ್ಕಾರಗಳಿಗೆ ಇಲ್ಲ ಈ ನಿಟ್ಟಿನಲ್ಲಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ನೀಡಿ, ಅವರನ್ನು ಬಿಡುಗಡೆ ಮಾಡುವ ಅಧಿಕಾರ ತಮಿಳುನಾಡು ಸರ್ಕಾರಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.ಈ ಹಿನ್ನೆಲೆಯಲ್ಲಿ ರಾಜೀವ್ ಹಂತಕರ ಬಿಡುಗಡೆಗೆ ತಡೆ ಬಿದ್ದಂತಾಗಿದೆ.
ರಾಜೀವ್ ಹತ್ಯೆ ಪ್ರಕರಣದ 7 ಜನ ದೋಷಿಗಳಿಗೆ ಗಲ್ಲು ಶಿಕ್ಷೆ ಈ ಹಿಂದೆ ನೀಡಲಾಗಿತ್ತು, ಆದರೆ ಶಿಕ್ಷೆ ಜಾರಿ ಮಾಡುವಲ್ಲಿ ವಿಳಂಬ ಆಗಿದ್ದ ಹಿನ್ನೆಲೆಯಲ್ಲಿ ಅವರ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಜೀವಾವಧಿಗೆ ಇಳಿಸಿತ್ತು. ಬಳಿಕ ತಮಿಳುನಾಡಿನ ಜಯಲಲಿತ ಸರಕಾರ ರಾಜೀವ್ ಹಂತಕರಿಗೆ ಕ್ಷಮಾದಾನ ನೀಡಿ ಅವರ ಬಿಡುಗಡೆ ಆದೇಶ ಹೊರಡಿಸಿತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶ್ನಿಸಿತ್ತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿದ್ದು ಸಿಬಿಐ. ಹಾಗಾಗಿ ಪ್ರಕರಣದ ದೋಷಿಗಳ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕೇ ವಿನಃ, ರಾಜ್ಯ ಸರ್ಕಾರವಲ್ಲ. ದೋಷಿಗಳ ಬಿಡುಗಡೆ ನಿರ್ಧಾರ ಕೇಂದ್ರಕ್ಕೆ ಬಿಟ್ಟಿದ್ದು ಎಂದು ನ್ಯಾಯಾಂಗ ಪೀಠ ಹೇಳಿದೆ.