ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಳೇಕಲ: ಖಾಸಗಿ ಶಾಲೆ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ನಡೆದ ಗಲಭೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಅಮಾಯಕರನ್ನು ಬಂಧಿಸಿದ್ದರೂ, ದರ್ಗಾ ಅಧ್ಯಕ್ಷರು ಮೌನ ವಹಿಸಿದ್ದಾರೆಂದು ಆರೋಪಿಸಿ ಎಸ್ ಡಿಪಿಐ ಕಾರ್ಯಕರ್ತರು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಅಧ್ಯಕ್ಷರ ಅಳೇಕಲದ ಮನೆಗೆ ಮುತ್ತಿಗೆ ಹಾಕಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರ ವಾಹನಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರಾದ ಹಂಝ ಅವರು ಪೊಲೀಸರು ಕಾನೂನು ಪ್ರಕಾರ ಕರ್ತವ್ಯ ನಿಭಾಯಿಸಿದಲ್ಲಿ , ಏನೂ ಮಾತನಾಡಲು ಅಸಾಧ್ಯ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಹಂಝ ಅವರನ್ನು ತರಾಟೆಗೆ ತೆಗೆದುಕೊಂಡು, ಗಲಾಟೆ ನಡೆಸಲು ಆರಂಭಿಸಿದರು. ಇದರಿಂದ ಮುಂಜಾಗ್ರತೆಗಾಗಿ ದರ್ಗಾ ಅಧ್ಯಕ್ಷರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಉಳ್ಳಾಲ ಪೊಲೀಸರು ಸಹಿತ ಹೆಚ್ಚುವರಿ ಕೆಎಸ್‍ಆರ್‍ಪಿ ಪೊಲೀಸ್ ವಾಹನ ದರ್ಗಾ ಅಧ್ಯಕ್ಷರ ಮನೆಯತ್ತ ಬಂದಿದೆ. ಪೊಲೀಸರನ್ನು ಕಂಡ ಕೂಡಲೇ ಮನೆಯಲ್ಲಿದ್ದ 30 ಮಂದಿ ಓಡಲು ಆರಂಭಿಸಿದ್ದು, ಇದರಲ್ಲಿ ಕೆಲವರು ಪೊಲೀಸ್ ವಾಹನಗಳಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ.
ಘಟನೆಯಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ದರ್ಗಾ ಅಧ್ಯಕ್ಷರ ಮನೆಗೆ ಬಿಗಿ ಬಂದೋಬಸ್ತ್ ನೀಡಲಾಗಿದೆ.