ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಸೋಮವಾರ ಮುಂಜಾನೆ ಮಸೀದಿ ಗುರುಗಳಿಗೆ ಯುವಕರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಡಿಪು ಬಾಳೆಪುಣಿ ಗ್ರಾಮದ,ಮುದುಂಗರ ಕಟ್ಟೆಯಲ್ಲಿ ನಡೆದಿದೆ.
ಮುನೀರ್ ಅಹಮದ್ ಸಖಾಫಿ ಎಂಬವರೇ ಯುವಕರಿಂದ ಮಾರಣಾಂತಿಕ ಹಲ್ಲೆಗೊಳಗಾದವರು. ಮುನೀರ್ ಅವರು ಕೆ.ಸಿ ರೋಡ್ ಮಸೀದಿಯಲ್ಲಿ ಕಳೆದ ಒಂದೂವರೆ ವರುಷದಿಂದ ಗುರುಗಳಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದು ,ಸೋಮವಾರ ಮುಂಜಾನೆ ವೇಳೆ ಸಾಲೆತ್ತೂರು ಕೊಲ್ನಾಡು ಗ್ರಾಮದ ,ಅಗರಿ ಹೌಸ್ ನಲ್ಲಿರುವ ತನ್ನ ಮನೆಗೆ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಮುಡಿಪು ,ಮುದುಂಗರ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಎರಡು ಬೈಕುಗಳಲ್ಲಿ ಬಂದ ಐದು ಯುವಕರು ಮುನೀರ್ ಅವರ ಬೈಕಿಗೆ ಅಡ್ಡಗಟ್ಟಿ ರಾಡು ಮತ್ತು ಸೋಂಟೆಗಳಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಉಸ್ತಾದನೆಂದು ತಪ್ಪುಗ್ರಹಿಕೆ:
ಮುದುಂಗರ ಕಟ್ಟೆಯ ಮದರಸವೊಂದರ ಉಸ್ತಾದನೊಬ್ಬ ಸ್ಥಳೀಯ ಮಹಿಳಾ ಜನಪ್ರನಿಧಿಯೊಬ್ಬರಿಗೆ ಉಟ್ಟ ಪಂಚೆ ಎತ್ತಿ ತೋರಿಸಿ ಅಶ್ಲೀಲವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದ್ದು ,ಇದರ ಹಿನ್ನೆಲೆಯಲ್ಲಿ ತಪ್ಪಾಗಿ ಗ್ರಹಿಸಿ ಅಮಾಯಕ ಮುನೀರ್ ಅವರಿಗೆ ಹಲ್ಲೆ ನಡೆಸಿರುವುದಾಗಿ ಮುನೀರ್ ಸಹವರ್ತಿಗಳು ಹೇಳಿದ್ದಾರೆ.
ಪ್ರಕರಣ ರಾಜಿಯಲ್ಲಿ ಸುಖಾಂತ್ಯ:
ಹಲ್ಲೆಗೊಳಗಾದ ಮುನೀರ್ ಅವರು ಆರು ಜನರ ವಿರುದ್ಧ ದೂರು ನೀಡಿದ್ದರೆ ,ಮುದುಂಗರಕಟ್ಟೆಯ ಮಹಿಳಾ ಜನಪ್ರತಿನಿಧಿಯೂ ಮುನೀರ್ ಸಖಾಫಿಯೇ ತನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ್ದು ,ಎರಡೂ ಕಡೆಗಳಿಂದ ದೂರು ಪ್ರತಿದೂರು ಸ್ವೀಕರಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ಸಂಜೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮತ್ತು ಮುಡಿಪುವಿನ ಸಮಾಜ ಸೇವಕ ಎಸ್ ಕೆ ಹಾಝರ್ ಅವರ ಮುಂದಾಳುತ್ವದಲ್ಲಿ ಕೋಣಾಜೆ ಠಾಣೆಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ರಾಜಿ ಸಂಧಾನ ಸಭೆ ನಡೆದು ಪ್ರಕರಣ ಸುಖಾಂತ್ಯ ಗೊಳಿಸಲಾಗಿದೆ. ಪ್ರಕರಣದ ಕುರಿತು ದೂರು ಪ್ರತಿದೂರು ದಾಖಲಾಗಿದ್ದು ನ್ಯಾಯಾಲಯದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮುಡಿಪು ಪರಿಸರ ಎರಡೂ ಕೋಮುಗಳ ಸಾಮರಸ್ಯದ ಪ್ರದೇಶವಾಗಿದ್ದು ,ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಅಹಿತಕರ ಘಟನೆ ನಡೆಯುತ್ತಿದ್ದು ,ಇಂತಹ ಘಟನೆ ಮತ್ತೆ ಮರುಕಳಿಸಲು ಬಿಡುವುದಿಲ್ಲ ಎಂದು ಎಸ್ ಕೆ ಹಾಝರ್ ಮತ್ತು ಸಂತೋಷ್ ಬೋಳಿಯಾರ್ ಹೇಳಿದ್ದಾರೆ.