Site icon Ullalavani

ಉಳ್ಳಾಲ ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ:ಟಿಪ್ಪು ಜಯಂತಿ ಆಚರಣೆ ವೇಳೆ ಉಳ್ಳಾಲದಲ್ಲಿ ನಡೆದ ಅಹಿತಕರ ಘಟನೆ ವೇಳೆ ಉದ್ರಿಕ್ತ ಜನರನ್ನು ಚದುರಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ ನಗರಸಭಾ ಸದಸ್ಯರಿಬ್ಬರಿಗೆ ಸಾರ್ವಜನಿಕವಾಗಿ ಅವಾಚ್ಯವಾಗಿ ನಿಂದಿಸಿ ,ಧರ್ಮನಿಂದನೆ ಮಾಡಿದ ಪೋಲೀಸರ ವಿರುದ್ಧ ಸಂತ್ರಸ್ತ ಕೌನ್ಸಿಲರ್ ಹನೀಫ್ ಕೋಟೆಪುರ ಅವರು ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.

ಟಿಪ್ಪು ಜಯಂತಿ ವಿವಾದದಲ್ಲಿ ಉಳ್ಳಾಲದಲ್ಲಿ ಅಹಿತಕರ ಘಟನೆಗಳು ನಡೆದಿದ್ದ ಸಂದರ್ಭ ನ.13 ರಂದು ರಾತ್ರಿ ಉಳ್ಳಾಲ ವೀರಭಧ್ರ ದೇವಸ್ಥಾನದ ಬಳಿ ಇಕ್ಬಾಲ್ ಎಂಬವರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಆರೋಪಿಗಳ ಪತ್ತೆಯಲ್ಲಿದ್ದ ಸಂದರ್ಭ ಮೊಗವೀರಪಟ್ನ ಸಮೀಪ ಇದ್ದ ಮೂವರು ಯುವಕರು ಸಮುದ್ರ ಹಾರಿ ಪರಾರಿಯಾಗಲು ಯತ್ನಿಸಿದ್ದರು. ಈ ಸಂಧರ್ಭ ಸಮುದ್ರದಲ್ಲಿ ನಾಡದೋಣಿ ಮೂಲಕ ಬಂದ ಮತ್ತೊಂದು ಕೋಮಿನ ಯುವಕರು ಮೊಗವೀರ ಪಟ್ಣದ ಯುವಕರಿಗೆ ಹಲ್ಲೆ ಮಾಡಿ ಕರಾವಳಿ ರಕ್ಷಣಾ ಪಡೆಗೆ ಸೆರೆ ಸಿಕ್ಕಿದ್ದರು.

ಇದೇ ವೇಳೆ ಕೋಟೆಪುರದಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಅಲ್ಲದೆ ಈ ಗೊಂದಲದ ವಾತಾವರಣ ನೋಡಲು ಕೋಟೆಪುರದಲ್ಲಿ ಜನಜಮಾವಣೆಗೊಂಡಿದ್ದು ,ಪೋಲೀಸರು ಜನರನ್ನು ಚದುರಿಸುವ ಕೆಲಸ ಮಾಡುತ್ತಿದ್ದು ಗಲಿಬಿಲಿಗೊಂಡ ಅಲ್ಲಿನ ನಿವಾಸಿಗಳು ಸ್ಥಳೀಯ ನಗರಸಭಾ ಸದಸ್ಯರಾದ ಹನೀಫ್ ಮತ್ತು ಪೊಡಿಮೋನು ಅವರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದ್ದರೆನ್ನಲಾಗಿದೆ.ಈ ವೇಳೆ ಸ್ಥಳಕ್ಕಾಗಮಿಸಿದ ಹನೀಫ್ ಮತ್ತು ಪೊಡಿಮೋನು ಅವರಿಬ್ಬರೂ ಸೇರಿ ನೆರೆದ ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿ ಮನೆಗೆ ಕಳುಹಿಸಿದ್ದಾರೆ.

ಈ ವೇಳೆ ಉಳ್ಳಾಲ ಠಾಣಾ ಪೋಲೀಸ್ ಪೇದೆಗಳಾದ ರಾಜಾರಾಂ ಮತ್ತು ಮೋಹನ್ ಎಂಬವರು ಕೈಯಲ್ಲಿ ಲಾಠಿ ಹಿಡಿದು ಅವಾಚ್ಯ ಶಬ್ದಗಳಿಂದ ನಗರಸಭಾ ಸದಸ್ಯರಿಬ್ಬರನ್ನೂ ನಿಂದಿಸಿ ನಿಮ್ಮಿಂದಲೇ ಗಲಾಟೆ ನಡೆಯುತ್ತಿದ್ದು ,ನಿಮ್ಮನ್ನು ಮೊದಲು ಜೈಲಿಗಟ್ಟಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲರ ಸಮ್ಮುಖದಲ್ಲೇ ಧರ್ಮ ನಿಂದನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಜನಪ್ರತಿನಿಧಿಗಳ ಜೊತೆಗೆನೆ ಈ ರೀತಿ ನೀಚವಾಗಿ ವರ್ತಿಸುವ ಧರ್ಮಾಂಧ ಪೋಲೀಸರನ್ನು ತಕ್ಷಣಕ್ಕೆ ಅಮಾನತುಗೊಳಿಸಿ ಅವರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದ್ದು ,ಪ್ರತಿಯನ್ನು ರಾಜ್ಯ ಗೃಹ ಮಂತ್ರಿ ,ರಾಜ್ಯ ಪೋಲೀಸ್ ಮಹಾನಿರ್ದೇಶಕ ,ಉಪ ಪೋಲೀಸ್ ಮಹಾನಿರ್ದೇಶಕ ,ಪೋಲೀಸ್ ದೂರು ಪ್ರಾಧಿಕಾರ ,ಮಂಗಳೂರು ಪೋಲೀಸ್ ಆಯುಕ್ತ ,ಸಹಾಯಕ ಆಯುಕ್ತರಿಗೆ ಕಳುಹಿಸಲಾಗಿದೆ.

Exit mobile version