Site icon Ullalavani

ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಸೇವೆಯ ಬೀಜವನ್ನು ಬಿತ್ತಬೇಕು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಸೇವಾ ಮನೋಭಾವ ಇಲ್ಲದಿರುವ ಶಿಕ್ಷಣ ಪರಿಪೂರ್ಣವಾಗದು , ಈ ನಿಟ್ಟಿನಲ್ಲಿ ಶಿಕ್ಷಣದ ಜತೆಗೆ ಸಮಾಜಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯು ಇನ್ನಷ್ಟು ಪರಿಣಾಮಕಾರಿಯಾಗಲು ಯೋಜನಾಧಿಕಾರಿಗಳ ಕೂಡುವಿಕೆಯಿಂದ ಸಾಧ್ಯ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕ ಅರುಣ್ ಪೂಜಾರ ಹೇಳಿದ್ದಾರೆ.

ಅವರು ನಿಟ್ಟೆ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಹಮ್ಮಿಕೊಂಡ ರಾಜ್ಯದ ವಿಶ್ವವಿದ್ಯಾನಿಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಸೇವೆಯ ಬೀಜವನ್ನು ಬಿತ್ತಬೇಕು. ಈ ಮೂಲಕ ಯುವಮನಸ್ಸಿನಲ್ಲಿ ಸಮಾಜದ ಬಗೆಗಿನ ಕಾಳಜಿ ಮೂಡಲು ಸಾಧ್ಯ. ಕೇವಲ ಶಿಕ್ಷಣ ಪಡೆದಲ್ಲಿ ದೇಶವನ್ನು ಬಲಿಷ್ಠಗೊಳಿಸಲು ಅಸಾಧ್ಯ, ಸಮಾಜ ಕಾರ್ಯಗಳಲ್ಲಿ ಯುವಜನಾಂಗವನ್ನು ತೊಡಗಿಸುವ ಕಾರ್ಯ ಮುಂಚೂಣಿಯಿಂದ ಆಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ.ಯ ಉಪಕುಲಪತಿ ಡಾ.ಯಸ್ ರಮಾನಂದ ಶೆಟ್ಟಿ ಮಾತನಾಡಿ ಶಿಕ್ಷಣದ ವ್ಯವಸ್ಥೆ ದೇಶವನ್ನು ಬೆಳಗಿಸುವುದು ಎಂಬ ಮಾತು ಈಗಿನ ಶಿಕ್ಷಣದ ವ್ಯವಸ್ಥೆಯಿಂದ ಸುಳ್ಳಾಗಿದೆ. ಎಂಜಿನಿಯರ್ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದರೆ, ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಳ್ಳುವವರು ಸರಕಾರದ ಸಹಾಯದಿಂದ ಶಿಕ್ಷಣ ಪಡೆದುಕೊಂಡರೂ ಗ್ರಾಮೀಣ ಭಾಗಗಳಲ್ಲಿ ಸೇವೆ ಮಾಡಲು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಏಳಿಗೆ ಜತೆಗೆ ಶಿಕ್ಷಣ ನೀಡುವಂತಾಗಬೇಕಿದೆ ಎಂದರು.

ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಪರ್ಕ ಅಧಿಕಾರಿ ಗಣನಾಥ್ ಎಕ್ಕಾರು , ನಿಟ್ಟೆ ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ.ಮುರಲೀ ಮೋಹನ್ ಚೂಂತಾರು , ನಿಟ್ಟೆ ವಿ.ವಿ.ಯ ಪರೀಕ್ಷಾಂಗ ಕುಲಸಚಿವೆ ಅಲ್ಕಾ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

Exit mobile version