ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ 125 ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ದ.ಕ ಜಿಲ್ಲಾಡಳಿತದ ವತಿಯಿಂದ ಪಿಲಿಕುಳ ನಿಸರ್ಗಧಾಮದಲ್ಲಿ ವಿನೂತನ ರೂಪದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಡಳಿತ ಮಕ್ಕಳ ದಿನಾಚರಣೆಯ ಅಂಗವಾಗಿ ಇದೇ ಮೊದಲ ಬಾರಿಗೆ ಪಿಲಿಕುಳ ನಿಸರ್ಗಧಾಮದಲ್ಲಿ ವಿಶಿಷ್ಟವಾಗಿರೋ ಮಕ್ಕಳ ಹಬ್ಬವನ್ನು ಹಮ್ಮಿಕೊಂಡಿದೆ. ಎರಡು ದಿನಗಳ ಕಾಲ ನಡೆಯಲಿರೋ ಮಕ್ಕಳ ಹಬ್ಬಕ್ಕಾಗಿ ನಿಸರ್ಗಧಾಮದ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ.
ಇಂದು ಬೆಳಿಗ್ಗೆಯಿಂದಲೇ ಪಿಲಿಕುಳ ನಿಸರ್ಗಧಾಮಕ್ಕೆ ಮಕ್ಕಳ ದಂಡೇ ಹರಿದು ಬಂದಿತ್ತು. ಹೀಗೆ ಬಂದ ಮಕ್ಕಳ ತಲೆಗೊಂದು ಟೊಪ್ಪಿ ಹಾಕಿ, ಕೈಗೊಂದು ಐಸ್ ಕ್ಯಾಂಡಿ ಕೊಟ್ಟು ಸತ್ಕರಿಸಲಾಯಿತು. ಮಕ್ಕಳು ಪಿಲಿಕುಳ ನಿಸರ್ಗಧಾಮದುದ್ದಕ್ಕೂ ಓಡಾಡುತ್ತಲೇ ಅವರಿಗೆ ತಿನ್ನೋದಕ್ಕೆ ಅಂತಾನೇ ಮಂಡಕ್ಕಿ, ಕಡಲೆಕಾಯಿ ರಾಶಿಯನ್ನ ಹಾಕಲಾಗಿತ್ತು. ಅಲ್ಲದೇ ಕಬ್ಬಿನ ಕೋಲನ್ನ ನೀಡಲಾಯಿತು. ಮಕ್ಕಳಿಗಾಗಿ ಸಂಗೀತ ಸ್ಪರ್ಧೆ, ಜೋಕಾಲಿ ಸ್ಪರ್ಧೆ, ಸೈಕಲ್ ರೇಸ್, ಬೀಟ್ ಬಾಕ್ಸ್ ನ್ನ ಆಯೋಜಿಸಲಾಗಿತ್ತು. ಹಬ್ಬದ ವಾತಾವರಣ ಸೃಷ್ಟಿಸೋದಕ್ಕಾಗಿಯೇ ಕುದುರೆ ಗಾಡಿ, ತೊಟ್ಟಿಲುಗಳಲ್ಲಿ ಕುಳ್ಳಿರಿಸಿ ಆಟವಾಡಿಸಲಾಯಿತು. ಇನ್ನು ಕುದುರೆ, ಒಂಟೆ ಸವಾರಿಯನ್ನೂ ಮಾಡಿಸಲಾಯಿತು. ಮಕ್ಕಳ ಹಬ್ಬದಲ್ಲಿ ಪಾಳ್ಗೊಳ್ಳೋ ಮಕ್ಕಳಿಗೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಜಿಲ್ಲೆಯ ಪ್ರತೀ ಶಾಲೆಯ ಮಕ್ಕಳು ಕೂಡ ಎರಡು ದಿನಗಳ ಕಾಲ ನಡೆಯಲಿರೋ ಮಕ್ಕಳ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಮಕ್ಕಳ ಜೊತೆಗೆ ಶಿಕ್ಷಕರು ಕೂಡ ವೀಕೆಂಡ್ ಹಬ್ಬದಲ್ಲಿ ಪಾಲ್ಗೊಂಡು ವಿಭಿನ್ನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂರ ಕನಸಿನ ಕೂಸು ಈ ಮಕ್ಕಳ ಹಬ್ಬ. ಇದಕ್ಕಾಗಿ ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗ ಮತ್ತು ಶಾಲಾ ಶಿಕ್ಷಕರನ್ನ ವಿಶ್ವಾಸಕ್ಕೆ ತೆಗೆದುಕೊಂಢ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಹಯೋಗ ಪಡೆದು ಈ ಬೃಹತ್ ಮಕ್ಕಳ ಹಬ್ಬವನ್ನ ಆಯೋಜಿಸಿದ್ದಾರೆ.