ಉಳ್ಳಾಲ: ಸಮುದ್ರಕ್ಕೆ ಜಿಗಿದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಈಜುಗಾರ ಸಂಘದವರು ರಕ್ಷಣೆಗೆ ಮುಂದಾದರೂ ಕಾರ್ಯಾಚರಣೆ ವಿಫಲವಾಗಿ ಆತ ಸಾವನ್ನಪ್ಪಿರುವ ಘಟನೆ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ಶನಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.ಮಾಡೂರು ನಿವಾಸಿ ದಿ| ನಾರಾಯಣ ಎಂಬವರ ಪುತ್ರ ರಂಜಿತ್ (26) ಆತ್ಮಹತ್ಯೆಗೈದವರು ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಸೋಮೇಶ್ವರದ ರುದ್ರಪಾದೆಯಲ್ಲಿ ಕುಳಿತಿದ್ದ ರಂಜಿತ್ ಏಕಾಏಕಿ ಸಮುದ್ರಕ್ಕೆ ಧುಮುಕಿದಾಗ ಸ್ಥಳದಲ್ಲೇ ಇದ್ದ ಈಜುಗಾರರಾದ ಅಶೋಕ್ ಮತ್ತು ಮೋಹನ್ ಎಂಬವರು ಸಮುದ್ರಕ್ಕೆ ರಕ್ಷಣೆಗೆಂದು ತೆರಳಿದ್ದರು. ಆದರೆ ನೀರಿನ ರಭಸಕ್ಕೆ ರಂಜಿತ್ ಮುಳುಗಿದ್ದರಿಂದಾಗಿ ನೀರಿನಲ್ಲಿ ಸಾವನ್ನಪ್ಪಿದ್ದಾರೆ. ಒಂದು ಗಂಟೆ ಕಾಲ ಇಬ್ಬರೂ ಈಜುಗಾರರು ಸಮುದ್ರದಲ್ಲಿ ಹುಡುಕಾಡಿ ಮೃತದೇಹವನ್ನು ಹೊರತೆಗೆದಿದ್ದಾರೆ. ಬೆಂಗಳೂರಿನಲ್ಲಿ ರಿಲಾಯನ್ಸ್ ಸಂಸ್ಥೆಗೆ ಸೇರಿದ ಕಂಪೆನಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಇತ್ತೀಚೆಗೆ ಊರಿಗೆ ಬಂದಿದ್ದ. ಮಾನಸಿಕವಾಗಿ ನೊಂದುಕೊಂಡಿದ್ದ ಈತ ಆತ್ಮಹತ್ಯೆಗೈದಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.