ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಕೊಣಾಜೆ ಪದವಿನ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಮೇಲ್ಛಾವಣಿಯು ಕುಸಿಯುವ ಹಂತದಲ್ಲಿ ಶಾಲೆಯನ್ನು ಸುಮಾರು 13 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸುವ ಯೋಜನೆಯನ್ನು ಲಯನ್ಸ್ ಜಿಲ್ಲೆ 317-ಡಿ, ಜಿಲ್ಲಾ ಲಯನೆಸ್ ಕ್ಲಬ್ ಹಮ್ಮಿಕೊಂಡಿದ್ದು ನವೀಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಯಿತು.
ಜಿಲ್ಲಾ ಲಯನೆಸ್ ಅಧ್ಯಕ್ಷೆ ಅರುಣಾ ಸೋಮಶೇಖರ್ ಮಾತನಾಡಿ, ಶಾಲೆ ಎನ್ನುವುದು ವಿದ್ಯಾ ದೇಗುಲವಾಗಿದ್ದು ಕೊಣಾಜೆ ಶಾಲೆಯ ದುಸ್ಥಿತಿಯಿಂದ ವಿದ್ಯಾರ್ಥಿಗಳು ಬಹಳಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಶಾಲೆಗೆ ಲಯನೆಸ್ ಕ್ಲಬ್ ವತಿಯಿಂದ ನವೀಕರಣಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಊರವರ ಮತ್ತು ಹಳೆವಿದ್ಯಾರ್ಥಿಗಳು ಕೂಡಾ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೋಮಶೇಖರ್, ಜಿಲ್ಲಾ ಲಯನೆಸ್ ಸಲಹೆಗಾರರಾದ ವಿಜಯಲಕ್ಷ್ಮೀ ಪಿ.ರೈ, ಪ್ರಾಜೆಕ್ಟ್ ಕಾರ್ಡಿನೇಟರ್ ವಿನುತಾ ಕಾಜವ, ಪ್ರಾಂತ್ಯ 4 ರ ಪ್ರಥಮ ಮಹಿಳೆ ಮೈನಾ ಕೊಂಡೆ, ಮಾಜಿ ಸಂಪುಟ ಕೋಶಾಧಿಕಾರಿ ಪ್ರಸಾದ್ ರೈ ಕಲ್ಲಿಮಾರ್, ಉದ್ಯಮಿ ಕೆ.ಕೆ.ನಾಸೀರ್, ಪಂಚಾಯಿತಿ ಸದಸ್ಯ ಅಚ್ಯುತ ಗಟ್ಟಿ, ಅಬ್ದುಲ್ ರಹಿಮಾನ್ ಕೋಡಿಜಾಲ್, ಶಿಕ್ಷಕ ವೃಂದ, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.