ಮಂಗಳೂರು: ತಮ್ಮ ಪುಟ್ಟ ಮಕ್ಕಳು ಹಾಗೂ ಕುಟುಂಬವನ್ನು ಬಿಟ್ಟು, ಕೊರೆಯುವ ಚಳಿ ಮತ್ತು ಮಳೆಯನ್ನೂ ಲೆಕ್ಕಿಸದೆ ಕಳೆದ ಹನ್ನೆರಡು ದಿನಗಳಿಂದ ತಮ್ಮ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಹಗಲು-ರಾತ್ರಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಸ್ಪಂದಿಸದಿರುವುದು ದುರದೃಷ್ಟಕರ. ಇದು ಹೃದಯವಿಲ್ಲದ ಸರ್ಕಾರ ಎಂದು ಜೀವನ್ ಕುಮಾರ್ ತೊಕ್ಕೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ತಮ್ಮ ಸೇವೆ ಅಗತ್ಯವಿಲ್ಲ ಎಂಬರ್ಥದಲ್ಲಿ ಆರೋಗ್ಯ ಸಚಿವ ಖಾದರ್ ಅವರು ಹೇಳಿಕೆ ನೀಡುತ್ತಿರುವುದು ಖಂಡನೀಯ. ಜಿಲ್ಲೆಯಲ್ಲಿ ಅಧಿಕಾರಿಗಳನ್ನು ಅಧಿಕಾರದ ಮದದಿಂದ ಬೆದರಿಸುವ ತಂತ್ರವನ್ನು ಬೆಂಗಳೂರಿಗೂ ತರಲು ಪ್ರಯತ್ನಿಸುತ್ತಿದ್ದಾರೆ. ಸಚಿವರು ತಮ್ಮ ಸ್ಥಾನದ ಘನತೆಯನ್ನು ಅರಿತು ಮಾತನಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 15,000 ರೂ.ಗಳಿಗೆ ಏರಿಕೆ ಮಾಡಬೇಕೆಂಬ ನ್ಯಾಯಸಮ್ಮತ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಆದರೆ, ಆರ್ಥಿಕ ಪರಿಸ್ಥಿತಿಯ ನೆಪವೊಡ್ಡಿ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ. ಮತ್ತೊಂದೆಡೆ ಕುಮಾರಕೃಪ ನವೀಕರಣಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಮಂಗಳೂರಿಗೆ ಆಗಮಿಸಿ 30 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಅನುದಾನದ ಘೋಷಣೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಅಭಿವೃದ್ಧಿಗೆ 6 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಲಾಗುತ್ತದೆ. ಹಾಗಾದರೆ ಇವೆಲ್ಲವೂ ಜನಸಾಮಾನ್ಯರನ್ನು ಮರುಳು ಮಾಡುವ ತಂತ್ರಗಳೇ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರ ಇಂತಹ ಬೂಟಾಟಿಕೆಗಳನ್ನು ಬದಿಗಿಟ್ಟು, ಆಶಾ ಕಾರ್ಯಕರ್ತೆಯರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಬೇಕು. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ತಕ್ಷಣ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಜೀವನ್ ಕುಮಾರ್ ತೊಕ್ಕೊಟು ಆಗ್ರಹಿಸಿದ್ದಾರೆ.