Site icon Ullalavani

ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ 11ನೇ ಬ್ಯಾಚ್ ಎಂಬಿಬಿಎಸ್ ವಿದ್ಯಾರ್ಥಿಗಳ ವೈಟ್ ಕೋಟ್ ಸಮಾರಂಭ

ದೇರಳಕಟ್ಟೆ: ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ 11ನೇ ಬ್ಯಾಚ್ ಎಂಬಿಬಿಎಸ್ ವಿದ್ಯಾರ್ಥಿಗಳ ವೈಟ್ ಕೋಟ್ ವಿತರಣಾ ಕಾರ್ಯಕ್ರಮ ಕಾಲೇಜಿನ ಕಾನ್ಫರೆನ್ಸ್ ಡ್ರೋಮ್‌ನಲ್ಲಿ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ರತ್ನಂ ಪಾಂಡೆ, ಐಎಎಸ್
ವೈಟ್ ಕೋಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವೈದ್ಯಕೀಯ ಶಿಕ್ಷಣವು ಕೇವಲ ಪದವಿ ಪಡೆಯುವ ಗುರಿಯಾಗಿರದೆ, ಸಮಾಜದ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಮಹತ್ವದ ಜವಾಬ್ದಾರಿಯಾಗಿದೆ. ವೈದ್ಯರು ರೋಗಿಗಳೊಂದಿಗೆ ಮಾನವೀಯತೆ, ಸಹಾನುಭೂತಿ ಹಾಗೂ ಗೌರವದಿಂದ ವರ್ತಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನೈತಿಕ ಮೌಲ್ಯಗಳಿಗೂ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಫರೀದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೈದ್ಯಕೀಯ ವೃತ್ತಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಬಿಳಿ ಕೋಟ್ ಧರಿಸುವುದು ಅವರ ವೃತ್ತಿಜೀವನದ ಮಹತ್ವದ ಘಟ್ಟವಾಗಿದೆ. ಇದು ಜವಾಬ್ದಾರಿ, ಶಿಸ್ತು, ಸೇವಾ ಮನೋಭಾವ ಮತ್ತು ರೋಗಿಗಳ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಉತ್ತಮ ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಂಡು ಸಮಾಜಕ್ಕೆ ಸಮರ್ಪಿತ ವೈದ್ಯರಾಗಬೇಕು ಎಂದು ಹೇಳಿದರು.

ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರೋಹನ್ ಎಸ್. ಮೊನಿಸ್ ಬಿಳಿ ಕೋಟ್‌ನ ಮಹತ್ವದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ 11ನೇ ಬ್ಯಾಚ್ ಎಂಬಿಬಿಎಸ್ 250 ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಿಸಲಾಯಿತು.

ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ
ಡಾ. ಹಾಜಿ ಯು.ಕೆ. ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸಲಹಾ ಸಮಿತಿ ಸದಸ್ಯ ಡಾ. ಎಂ.ವಿ. ಪ್ರಭು, ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್ ಉಪಸ್ಥಿತರಿದ್ದರು.

ಕನಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಡೀನ್ ಡಾ. ಶಹನಾವಾಝ್ ಮಾಣಿಪ್ಪಾಡಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಡಾ. ರೋಶನ್ ವಂದಿಸಿದರು.
ವಿದ್ಯಾರ್ಥಿಗಳಾದ ನೂರ್ ಹೈಮಾದ್ ರಬ್ಬಾನಿ ಹಾಗೂ ಮೊಹಮ್ಮದ್ ಸಾದ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.

Exit mobile version