Site icon Ullalavani

ಉಡುಪಿ :ಜೈಲು ಶಿಕ್ಷೆ ಮುಗಿದ ಬೆನ್ನಲ್ಲೇ 10 ಬಾಂಗ್ಲಾದೇಶಿ ಪ್ರಜೆಗಳ ಗಡೀಪಾರಿಗೆ ಪೊಲೀಸರ ಕ್ರಮ

ಉಡುಪಿ, ನ.26 : ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಶಿಕ್ಷೆಗೊಳಗಾಗಿದ್ದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಅವರ ತಾಯ್ನಾಡಿಗೆ ಗಡೀಪಾರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.

2024ರ ಅಕ್ಟೋಬರ್ 11ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 10 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರು ಅವರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದರು. ತನಿಖೆಯ ವೇಳೆ ಅವರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ಪ್ರಜೆಗಳು ಎಂಬುದು ದೃಢಪಟ್ಟಿತ್ತು. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 2025ರ ಡಿಸೆಂಬರ್ 8ರಂದು ಎಲ್ಲಾ 10 ಆರೋಪಿಗಳಿಗೆ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 10,000 ರೂ. ದಂಡ ವಿಧಿಸಿತ್ತು. ಆರಂಭದಲ್ಲಿ ಅವರನ್ನು ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದ್ದು, ಬಳಿಕ ಶಿಕ್ಷೆ ಅನುಭವಿಸಲು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಅವರ ಜೈಲು ಶಿಕ್ಷೆಯ ಅವಧಿ 2026ರ ಅಕ್ಟೋಬರ್ 10ರಂದು ಪೂರ್ಣಗೊಂಡಿತ್ತು. ಕೇಂದ್ರ ಗೃಹ ಸಚಿವಾಲಯ ಹಾಗೂ ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಯ ಆದೇಶದಂತೆ, 10 ಮಂದಿಯನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಯಿತು.ಈ ಕಾರ್ಯಾಚರಣೆಯ ಭಾಗವಾಗಿ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ಪೊಲೀಸ್ ತಂಡವು ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ನವೆಂಬರ್ 23ರಂದು ಉಡುಪಿಯಿಂದ ರೈಲಿನಲ್ಲಿ ಹೊರಟು, 10 ಮಂದಿಯನ್ನು ಬೆಂಗಳೂರಿಗೆ ಕರೆದೊಯ್ದಿತು. ಅಲ್ಲಿಂದ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಕಮಾಂಡೆಂಟ್ ಹಾಗೂ ನೋಡಲ್ ಅಧಿಕಾರಿಯ ವಶಕ್ಕೆ ಹಸ್ತಾಂತರಿಸಲು ಕರೆದೊಯ್ಯಲಾಯಿತು. ಅಲ್ಲಿ ಔಪಚಾರಿಕ ಗಡೀಪಾರು ಪ್ರಕ್ರಿಯೆ ಪೂರ್ಣಗೊಳಿಸಲು ವ್ಯವಸ್ಥೆ ಮಾಡಲಾಗಿದೆ.ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ವಿದೇಶಿಯರ ನೋಂದಣಿ ಅಧಿಕಾರಿ ಹರಿರಾಮ್ ಶಂಕರ್, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಜಿಲ್ಲಾ ವಿಶೇಷ ಶಾಖೆಯ ಪೊಲೀಸ್ ನಿರೀಕ್ಷಕ ಹರೀಶ್ ಆರ್., ಜಿಲ್ಲಾ ವಿದೇಶಿ ವಿಭಾಗದ ಎಎಸ್‌ಐ ಪ್ರದೀಪ್, ಅಮರ್ ಕುಮಾರ್ ಮತ್ತು ಮೈತ್ರಿ ಅವರು ಗಡೀಪಾರು ಪ್ರಕ್ರಿಯೆಯಲ್ಲಿ ಸಹಕರಿಸಿದ್ದಾರೆ.

Exit mobile version