ಉರ್ವಾ: ಇಲ್ಲಿನ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟವು ಸಂಭ್ರಮ ಹಾಗೂ ಉತ್ಸಾಹದಿಂದ ಜರುಗಿತು.
ಚರ್ಚ್ ಪಾಲನಾ ಮಂಡಳಿಯ 21 ಆಯೋಗಗಳ ಸಂಯೋಜಕರಾದ ಗೇಬ್ರಿಯಲ್ ಸಿಡ್ನಿ ಸಾರ್ಥೋ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ವಂ. ಫಾದರ್ ಬೆಂಜಮಿನ್ ಪಿಂಟೋ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ, ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ದೃಢತೆಯನ್ನು ಬೆಳೆಸುವುದರ ಜೊತೆಗೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಶೈಲಶ್ರೀ, ಹಿರಿಯ ಶಿಕ್ಷಕಿ ಲವೀನ ಡಿಕುನ್ಹಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಮೋದ್, ಸುಧಾಕರ್ ಹಾಗೂ ಹರಿಣಾಕ್ಷಿ ಉಪಸ್ಥಿತರಿದ್ದರು.
ಹರಿಣಾಕ್ಷಿ ಮತ್ತು ವಿಶಿತ ಸ್ವಾಗತಿಸಿದರು. ಶಾಲಾ ಉಪನಾಯಕಿ ಜೇನ್ ವಂದಿಸಿದರು.
ಕ್ರೀಡಾ ಮನೋಭಾವ, ಶಿಸ್ತು ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ವಾರ್ಷಿಕ ಕ್ರೀಡಾಕೂಟವು ಯಶಸ್ವಿಯಾಗಿ ಸಂಪನ್ನಗೊಂಡಿತು.