ಮಂಗಳೂರು: ನ್ಯಾಯಾಲಯಕ್ಕೆ ಸುಮಾರು ಐದು ವರ್ಷಗಳಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ (LPC) ಪ್ರಕರಣದ ಆರೋಪಿತನನ್ನು ಮಂಗಳೂರು ಉತ್ತರ ಪೊಲೀಸರು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ 235/2016ರ ಅಡಿಯಲ್ಲಿ ಐಪಿಸಿ ಕಲಂ 457, 380 ಜೊತೆಗೆ 34ರಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸಿ.ಸಿ. ಸಂಖ್ಯೆ 191/2021ರ ಆರೋಪಿತನಾದ ಉಳ್ಳಾಲ ಬಸ್ತಿಪಡ್ಪು ನಿವಾಸಿ ಜಿಮ್ಮಿ ಅಲಿಯಾಸ್ ಜಿಂಕೆ ಜಿಮ್ಮಿ ಅಲಿಯಾಸ್ ಪೈಜಲ್ ಅಲಿಯಾಸ್ ಮಹಮ್ಮದ್ ಪೈಜಲ್ ಎಂಬಾತನು ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ 2026ರಲ್ಲಿ ನ್ಯಾಯಾಲಯವು ಪ್ರಕರಣವನ್ನು ಎಲ್‌ಪಿಸಿ (LPC) ಪ್ರಕರಣವೆಂದು ಪರಿಗಣಿಸಿತ್ತು.
ತಲೆಮರೆಸಿಕೊಂಡಿದ್ದ ಆರೋಪಿತನನ್ನು ನವೆಂಬರ್ 24ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಪತ್ತೆಹಚ್ಚಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಆರೋಪಿತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.